ನವದೆಹಲಿ: ದೇಶದ ಶೇ. 70 ರಷ್ಟು ವಯಸ್ಕರಿಗೆ ಕೋವಿಡ್ -19 ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ದೇಶಾದ್ಯಂತ 91 ಕೋಟಿಗೂ ಹೆಚ್ಚು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಮತ್ತು ಶೇ. 25 ರಷ್ಟು ವಯಸ್ಕರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ.
"ಬಲಿಷ್ಠ ರಾಷ್ಟ್ರ, ಕ್ಷಿಪ್ರ ಲಸಿಕೆ: ಭಾರತದಲ್ಲಿ ಶೇ. 70 ವಯಸ್ಕರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಹೊಸ ದಾಖಲೆಗಳನ್ನು ಸಾಧಿಸುತ್ತಿದೆ. ಇದನ್ನು ಮುಂದುವರಿಸಿ, ನಾವು ಕೊರೋನಾ ವಿರುದ್ಧ ಹೋರಾಡೋಣ ಎಂದು ಕೇಂದ್ರ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 5.67 ಕೋಟಿಗಿಂತಲೂ ಹೆಚ್ಚು (5,67,37,905) ಡೋಸ್ ಕೋವಿಡ್ ಲಸಿಕೆ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.