ಲಖನೌ: ಲಖಿಂಪುರ್ ಖೇರಿಯಲ್ಲಿ ರೈತರ ಪ್ರತಿಭಟನೆ ಭಾನುವಾರ ಹಿಂಸಾಚಾರಕ್ಕೆ ತಿರುಗಿ ನಾಲ್ವರು ರೈತರು ಸೇರಿದಂತೆ ಕನಿಷ್ಠ 8 ಮಂದಿಯ ಹತ್ಯೆಯಾಗಿದೆ. ಈ ಘಟನೆಯಲ್ಲಿ ಸುಮಾರು 15 ಜನರಿಗೆ ಗಾಯಗೊಂಡಿರುವುದಾಗಿ ಮೂಲಗಳು ಹೇಳಿವೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿಇಂದು ನಡೆದ ಹಿಂಸಾಚಾರದಲ್ಲಿ ರೈತರ ಮೇಲೆ ಕಾರನ್ನು ಹರಿಸಿದ ನಾಲ್ಕು ಮಂದಿ ಹಾಗೂ ನಾಲ್ವರು ರೈತರು ಸೇರಿದಂತೆ ಒಟ್ಟು ಮಂದಿ ಸಾವನ್ನಪ್ಪಿರುವುದಾಗಿ ಲಖಿಂಪುರ್ ಖೇರಿ ಹೆಚ್ಚುವರಿ ಎಸ್ ಪಿ ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಭೇಟಿ ವಿರೋಧಿಸಿ ಭಾನುವಾರ ಬೆಳಗ್ಗೆ ಕೃಷಿ ಕಾನೂನು ರದ್ಧತಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪೊಂದು ನಿಘಾಸನ್ ಪ್ರದೇಶದ ಟಿಕುನಿಯಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಹಿಂಸಾಚಾರ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವರ ಬೆಂಗಾವಲು ವಾಹನವೊಂದು ಇಬ್ಬರು ಪ್ರತಿಭಟನಾಕಾರರ ಮೇಲೆ ಹರಿದಿದೆ. ಈ ವಾಹನ ಮಿಶ್ರಾ ಅವರ ಮಗನಿಗೆ ಸೇರಿದ್ದು ಎಂದು ರೈತ ಸಂಘಟನೆಗಳು ಆರೋಪಿಸಿವೆ. ಇದರಿಂದ ಉದ್ರಿಕ್ತಗೊಂಡ ರೈತರು ಮೂರು ಜೀಪ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಆದಾಗ್ಯೂ, ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಜಯ್ ಮಿಶ್ರಾ, ರೈತರ ಮೇಲೆ ಹರಿದ ಕಾರನ್ನು ತನ್ನ ಮಗ ಚಲಾಯಿಸುತ್ತಿರಲಿಲ್ಲ ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.
ಹಿಂಸಾಚಾರ ಸಂಭವಿಸಿದ ಪ್ರದೇಶದಲ್ಲಿ ನನ್ನ ಮಗ ಇರಲಿಲ್ಲ ಎಂದು ಅಜಯ್ ಮಿಶ್ರಾ ತಿಳಿಸಿದ್ದಾರೆ. ಸಮಾಜ ಘಾತುಕ ಶಕ್ತಿಗಳು ತಮ್ಮ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಇದರಿಂದಾಗಿ ಅವರ ಕಾರು ಪಲ್ಟಿಯಾಗಿದೆ ಮತ್ತು ಇಬ್ಬರು ರೈತರು ಅದರ ಕೆಳಗೆ ಸಿಲುಕಿದ್ದಾರೆ. ಇಡೀ ಘಟನೆಯು ಪಿತೂರಿ ಎಂದು ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ತನ್ನ ಕಾರಿನ ಚಾಲಕ ಹಾಗೂ ಇತರ ಮೂವರು ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಈ ಸಂಬಂಧದ ಪೊಲೀಸ್ ತನಿಖೆಗೆ ತನ್ನ ಮಗ ಸಹಕರಿಸುತ್ತಾನೆ ಎಂದು ಮಿಶ್ರಾ ತಿಳಿಸಿದ್ದಾರೆ.