ನವದೆಹಲಿ: ಚೀನಾದ ಸೇನಾಪಡೆಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಭಾರತೀಯ ಸೇನೆಯು ಅಲರ್ಟ್ ಆಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಮೊದಲ ಕೆ-9 ವಜ್ರ ಸ್ವಯಂ ಚಾಲಿತ ಹೊವಿಟ್ಜರ್ ರೆಜಿಮೆಂಟ್ ಅನ್ನು ಲಡಾಖ್ ವಲಯದಲ್ಲಿ ನಿಯೋಜಿಸಲಾಗಿದೆ.
ಭಾರತ ಮತ್ತು ಚೀನಾ ನಡುವಿನ ಪೂರ್ವ ಮತ್ತು ಉತ್ತರ ಲಡಾಖ್ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಚೀನಾ ಸೇನೆಯನ್ನು ನಿಯೋಜನೆ ಮಾಡಲಾಗುತ್ತಿದ್ದು, ಈ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಅವರು ಮಾಹಿತಿ ನೀಡಿದ ಬೆನ್ನಲ್ಲೇ ಭಾರತೀಯ ಸೇನೆ ತನ್ನ ಮೊಟ್ಟ ಮೊದಲ ಕೆ-9 ವಜ್ರ ಸ್ವಯಂ ಚಾಲಿತ ಹೊವಿಟ್ಜರ್ ಫಿರಂಗಿಗಳನ್ನು ನಿಯೋಜನೆ ಮಾಡಿದೆ. ಈ ಹೊವಿಟ್ಜರ್ ಗನ್ 50 ಕಿಲೋ ಮೀಟರ್ ದೂರದ ಶತ್ರುಪಡೆಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಗಡಿಯಲ್ಲಿ ಹೆಚ್ಚಿದ ಸೇನಾ ಚಟುವಟಿಕೆ
ಭಾರತದ ಈಸ್ಟರ್ನ್ ಕಮಾಂಡ್ ತನಕ ಪೀಪಲ್ಸ್ ಲಿಬರೇಷನ್ ಆರ್ಮಿ ತನ್ನ ಸೇನಾ ನಿಯೋಜನೆ ಪ್ರಮಾಣವನ್ನು ಗಣನೀಯ ಮಟ್ಟದಲ್ಲಿ ಹೆಚ್ಚಿಸಿಕೊಂಡಿದೆ. ಪೂರ್ವ ಲಡಾಖ್ ಮತ್ತು ಉತ್ತರ ಲಡಾಖ್ ಭಾಗದಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಈ ಬಗ್ಗೆ ತೀವ್ರ ಎಚ್ಚರಿಕೆ ವಹಿಸಲಾಗಿದೆ. ಖಂಡಿತವಾಗಿಯೂ, ಮುಂದಿನ ಪ್ರದೇಶಗಳಲ್ಲಿ ಚೀನಾ ಸೇನೆಯ ನಿಯೋಜನೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ನಾವು ಕಾಳಜಿ ವಹಿಸಬೇಕಾದ ವಿಷಯವಾಗಿದೆ ಎಂದು ಅವರು ನಾರವಾನೆ ಲಡಾಖ್‌ನಲ್ಲಿ ಹೇಳಿದ್ದಾರೆ.
ಗುಪ್ತಚರ ಮಾಹಿತಿ
ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಪ್ರಧಾನ ಕಚೇರಿಯಲ್ಲಿ ಎರಡು ದೇಶಗಳ ನಡುವೆ ಗುಪ್ತಚರ ಹಂಚಿಕೆ ವ್ಯವಸ್ಥೆಯ ಉದ್ದೇಶವಾಗಿ ಪಾಕಿಸ್ತಾನದ ಸೇನಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಮೂಲಗಳ ಪ್ರಕಾರ, ಚೀನಾದ ಪಶ್ಚಿಮ ಥಿಯೇಟರ್ ಕಮಾಂಡ್ ಮತ್ತು ದಕ್ಷಿಣ ಥಿಯೇಟರ್ ಕಮಾಂಡ್ ಪ್ರಧಾನ ಕಛೇರಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ನಿರ್ಣಾಯಕ ಪಶ್ಚಿಮ ಥಿಯೇಟರ್ ಕಮಾಂಡ್ ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದೊಂದಿಗೆ ಭಾರತದ ಗಡಿಗಳನ್ನು ನೋಡಿಕೊಳ್ಳುತ್ತದೆ. ಕಳೆದ ತಿಂಗಳಷ್ಟೇ ಚೀನಾ ಸರ್ಕಾರವು ಪಶ್ಚಿಮ ಥಿಯೇಟರ್ ಕಮಾಂಡ್‌ನ ಹೊಸ ಕಮಾಂಡರ್ ಆಗಿ ಜನರಲ್ ವಾಂಗ್ ಹೈಜಿಯಾಂಗ್ ಅವರನ್ನು ನೇಮಿಸಿತ್ತು.
ಭಾರತ ಮತ್ತು ಚೀನಾ ಯೋಧರ ನಡುವೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ಹೊರಡಿಸಲಾದ ಆದೇಶದಿಂದ ಚೀನಾದ ಹೆಚ್ಚಿನ ಯೋಧರು ಪೂರ್ವ ಲಡಾಖ್ ಪ್ರದೇಶದಲ್ಲಿ ನಿಯೋಜನೆ ಮಾಡುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳಿಂದ ತಿಳಿದು ಬಂದಿದೆ.