ಲಂಡನ್: ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿರುವ ಅಧ್ಯಯನದ ಪ್ರಕಾರ, 'ಕೋವಿಡ್-19' ಸಾಂಕ್ರಾಮಿಕದ ಡೆಲ್ಟಾ ರೂಪಾಂತರ ಸೋಂಕಿನಿಂದ ಸಂಭವಿಸಬಹುದಾದ ಸಾವನ್ನು ತಡೆಗಟ್ಟುವಲ್ಲಿ ಕೋವಿಶೀಲ್ಡ್ ಮತ್ತು ಫೈಜರ್ ಕಂಪನಿಯ ಎರಡು ಡೋಸ್ ಕೋವಿಡ್ ಲಸಿಕೆಗಳು ಶೇ 90ರಷ್ಟು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ.
ಸ್ಕಾಟ್ಲೆಂಡ್-ವೈಡ್ ಇಎವಿಇ II ಕೋವಿಡ್-19 ಸರ್ವೇಲೆನ್ಸ್ ದತ್ತಾಂಶವನ್ನು ಬಳಸಿಕೊಂಡು ನಡೆಸಿರುವ ಈ ಅಧ್ಯಯನವು ಮೊದಲ ಬಾರಿಗೆ, ವಿವಿಧ ದೇಶಗಳಲ್ಲಿ ಡೆಲ್ಟಾ ರೂಪಾಂತರ ಸೋಂಕಿನಿಂದ ಸಂಭವಿಸುವ ಸಾವನ್ನು ತಡೆಗಟ್ಟುವಲ್ಲಿ ಕೋವಿಡ್ ಲಸಿಕೆಗಳು ಹೇಗೆ ಪರಿಣಾಮಕಾರಿಯಾಗಿವೆ ಎಂಬುದನ್ನು ತೋರಿಸಿದೆ.
ಎಡಿನ್‌ಬರ್ಗ್ ಮತ್ತು ಸ್ಟ್ರಾತ್‌ಕ್ಲೈಡ್ ವಿಶ್ವವಿದ್ಯಾಲಯಗಳು ಮತ್ತು ಸ್ಕಾಟ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಕೇಂದ್ರವನ್ನೊಳಗೊಂಡ ಸಂಶೋಧನಾ ತಂಡ ಏಪ್ರಿಲ್ 1 ರಿಂದ ಸೆ. 27ರವರೆಗೆ ಸ್ಕಾಟ್ಲೆಂಡ್‌ನಲ್ಲಿರುವ 54 ಲಕ್ಷ ಜನರಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿ, ಅಧ್ಯಯನ ನಡೆಸಿದೆ.
ಅಧ್ಯಯನದ ಪ್ರಕಾರ, ಈ ಅವಧಿಯಲ್ಲಿ ಪಿಸಿಆರ್ ಮೂಲಕ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 1,15,000 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು ಸೋಂಕಿನಿಂದಾಗಿ 201 ಸಾವುಗಳು ಸಂಭವಿಸಿವೆ.