ನವದೆಹಲಿ: ಮಾರಕ ಕೊರೋನಾ ಸೋಂಕಿನ ವಿರುದ್ಧ ರಕ್ಷಣೆ ನೀಡುವ ಕೋವಿಡ್ ಲಸಿಕೆ ನೀಡಿಕೆಯಲ್ಲಿ ಅಮೆರಿಕ, ಚೀನಾ, ಭಾರತದಂತಹ ದೈತ್ಯ ರಾಷ್ಟ್ರಗಳೇ ಹರಸಾಹಸ ಪಡುತ್ತಿದ್ದು, ಇಂತಹ ಹೊತ್ತಿನಲ್ಲೇ ಫಿಸಿಫಿಕ್ ಪ್ರಾಂತ್ಯದ ಪುಟ್ಟ ರಾಷ್ಟ್ರವೊಂದು ತನ್ನ ದೇಶದ ಶೇ.99ರಷ್ಟು ಮಂದಿಗೆ ಲಸಿಕೆ ನೀಡಿ ಇದೀಗ ಜಗತ್ತಿನಾದ್ಯಂತ ಸುದ್ದಿಗೆ ಗ್ರಾಸವಾಗಿದೆ.
ಹೌದು.. ಕೊರೊನಾ ವಿರುದ್ಧದ ಹೋರಾಟದಲ್ಲಿ ಬಲಾಢ್ಯ ರಾಷ್ಟ್ರಗಳನ್ನು ಪುಟ್ಟ ದೇಶ ಪಲಾವ್ (Palau) ಹಿಂದಿಕ್ಕಿದ್ದು, ಪೆಸಿಫಿಕ್ ಮಹಾಸಾಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಸಣ್ಣ ದ್ವೀಪಗಳ ಸಮೂಹವನ್ನು ಪುಲಾವ್ ರಾಷ್ಟ್ರ ಹೊಂದಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಅಮೆರಿಕ, ರಷ್ಯಾ, ಬ್ರಿಟನ್, ಚೀನಾದಂಥ ಬಲಾಢ್ಯ ಆರ್ಥಿಕತೆ ಹೊಂದಿರುವ ರಾಷ್ಟ್ರಗಳನ್ನು ಹಿಂದಿಕ್ಕಿರುವ ಪಲಾವ್, ಶೇ.99ರಷ್ಟು ಜನರಿಗೆ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.
12 ವರ್ಷಕ್ಕಿಂತ ಮೇಲ್ಪಟ್ಟ ಪಲಾವ್ ನ ಶೇ.99 ರಷ್ಟು ನಾಗರಿಕರಿಗೆ ಅಲ್ಲಿನ ಸರ್ಕಾರ, ಎರಡು ಡೋಸ್ ಲಸಿಕೆ ಹಾಕಿದೆ. ಇದು ಅತ್ಯಂತ ಗಮನಾರ್ಹವಾದ ವಿಚಾರ ಎಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಫೆಡರೇಷನ್ (IFRC) ಅಭಿಪ್ರಾಯಪಟ್ಟಿದೆ.
ಪಲಾವ್ ಸರ್ಕಾರದ ಅಂಕಿ ಅಂಶಗಳನ್ನು ಉಲ್ಲೇಖಿಸಿರುವ ರೆಡ್ ಕ್ರಾಸ್ ಸಂಸ್ಥೆ, ಸುಮಾರು 18,000 ಜನಸಂಖ್ಯೆಯನ್ನು ಈ ಪುಟ್ಟ ರಾಷ್ಟ್ರ ಹೊಂದಿದೆ. ಅದರಲ್ಲಿ 16,152 ಜನರಿಗೆ ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಹಾಕಲಾಗಿದೆ ಎಂದು ತಿಳಿಸಿದೆ. ಪಲಾವ್, ಕುಕ್, ಫಿಜಿ ಸೇರಿದಂತೆ ಶಾಂತ ಸಾಗರದಲ್ಲಿನ ಅನೇಕ ದ್ವೀಪ ರಾಷ್ಟ್ರಗಳು, ಸಂಪೂರ್ಣ ಲಸಿಕೆ ಹೊಂದುವುದು ಮುಖ್ಯಎಂದೂ ಐಎಫ್ ಆರ್ ಸಿಯ ಪೆಸಿಫಿಕ್ ಕಚೇರಿಯ ಮುಖ್ಯಸ್ಥ ಕಟೇ ಗ್ರೀನ್ ವುಡ್ ತಿಳಿಸಿದ್ದಾರೆ.
ಪಲಾವ್ ರಾಷ್ಟ್ರದ ಸಮೀಪದಲ್ಲೇ ಇರುವ ಸೋಲೋಮನ್ 6 ಲಕ್ಷ 50 ಸಾವಿರ ಜನಸಂಖ್ಯೆಯನ್ನು ಹೊಂದಿದ್ದರೆ, ಕಿರಿಬಟಿ 1 ಲಕ್ಷ 19 ಸಾವಿರ ಜನಸಂಖ್ಯೆಯನ್ನು ಹೊಂದಿವೆ. ಆದ್ರೆ, ಈ ಎರಡೂ ರಾಷ್ಟ್ರಗಳು ಶೇ.10ಕ್ಕಿಂತ ಕಡಿಮೆ ವ್ಯಾಕ್ಸಿನೇಷನ್ನ್ ನೀಡಿವೆ ಎಂದು ಹೇಳಲಾಗಿದೆ.