ಕಾಸರಗೋಡು: ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಜಂಟಿಯಾಗಿ ಮೂತ್ರ ಜನಕಾಂಗ ರೋಗಿಗಳಿಗಾಗಿ ರಚಿಸುವ ಕಾಸರಗೋಡು ಇನೀಶಿಯೇಟಿವ್ ಫಾರ್ ಡಯಾಲಿಸಿಸ್ ಸೊಸೈಟಿ(ಕಿಡ್ಸ್) ಗೆ ರಾಜ್ಯ ಏಕೋಪನ ಸಮಿತಿ ಅಂಗೀಕಾರ ನೀಡಿದೆ.
ಕಾಸರಗೋಡು ಜಿಲ್ಲೆಯ 9 ಕೇಂದ್ರಗಳಲ್ಲಿ ಡಯಾಲಿಸಿಸ್ ಸೌಲಭ್ಯ ಏರ್ಪಡಿಸಿ ಬಡ ಕಿಡ್ನಿಸಂಬಂಧಿ ಕಾಯಿಲೆ ಎದುರಿಸುತ್ತಿರುವ ರೋಗಿಗಳಿಗೆ ಚಿಕಿತ್ಸಾ ಸಹಾಯ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯ ಸ್ವಂತ ಯೋಜನೆಯಾಗಿರುವ 'ಕಿಡ್ಸ್'ಗೆ ಅಂಗೀಕಾರ ಲಭಿಸಿರುವ ಹಿನ್ನೆಲೆಯಲ್ಲಿ 9 ಕೇಂದ್ರಗಳಲ್ಲೂ ನ.5ರಮುಂಚಿತವಾಗಿ ಮೆನೆಜ್ ಮೆಂಟ್ ಕಮಿಟಿ ರಚಿಸಲು ಜಿಲ್ಲಾ ಪಂಚಾಯಿತಿ ಸಭೆ ತೀರ್ಮಾನಿಸಿದೆ. ಆಯಾ ಡಯಾಲಿಸಿಸ್ ಕೇಂದ್ರಗಳಲ್ಲಿ ಬ್ಲೋಕ್ ಪಂಚಾಯಿತಿ ಅಧ್ಯಕ್ಷ ಯಾ ನಗರಸಭೆ ಅಧ್ಯಕ್ಷ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾಪಂಚಾಯಿತಿ ಸದಸ್ಯರು ಉಪಾಧ್ಯಕ್ಷರುಗಳಾಗಿ, ವೈದ್ಯಾಧಿಕಾರಿ ಯಾ ವರಿಷ್ಠಾಧಿಕಾರಿ ಸಂಚಾಲಕರಾಗಿ ಮೆನೆಜ್ ಮೆಂಟ್ ಕಮಿಟಿ ರಚನೆಗೊಳ್ಳಲಿದೆ.
ಪ್ರತಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು ಮೆನೆಜ್ ಮೆಂಟ್ ಕಮಿಟಿಯ ಸದಸ್ಯರಾಗಿ ಚಟುವಟಿಕೆ ನಡೆಸುವರು. ನ.15ರ ಮುಂಚಿತವಾಗಿ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿ ರೋಗಿಗಳಿಗೆ ಸೇವೆ ಲಭ್ಯವಾಗಿಸಲು ಉದ್ದೇಶಿಸಿರುವುದಾಗಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ.