ಚೆನ್ನೈ: ಅಪಾಯಕ್ಕೆ ಸಿಲುಕಿದಾಗ ತುರ್ತು ಸಂದೇಶ ರವಾನಿಸುವ ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ತಂತ್ರಜ್ಞಾನ ಸಹಾಯದಿಂದ ಚೆನ್ನೈನ ಪ್ರಕ್ಷುಬ್ದ ಕಡಲಲ್ಲಿ ಸಿಲುಕಿಕೊಂಡಿದ್ದ 9 ಮಂದಿ ನಾವಿಕರನ್ನು ಕರಾವಳಿ ಪಡೆ ರಕ್ಷಣೆ ಮಾಡಿದೆ.
ತೂತುಕುಡಿಯಿಂದ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಹಡಗು ಸಮುದ್ರಮಧ್ಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಹಡಗಿನಲ್ಲಿದ್ದವರು ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ಬಳಸಿ ಅಪಾಯದ ಸಂದೇಶವನ್ನು ರವಾನಿಸಿದ್ದರು.
ಅಪಾಯದ ಸಂದೇಶ ಸ್ವೀಕರಿಸುತ್ತಲೇ ಕರಾವಳಿ ರಕ್ಷಣಾ ಪಡೆ ನಾವಿಕರ ರಕ್ಷಣೆಗೆ ಧಾವಿಸಿತ್ತು. ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ತಂತ್ರಜ್ಞಾನ ಸ್ವದೇಶಿ ನಿರ್ಮಿತ ಎನ್ನುವುದು ಗಮನಾರ್ಹ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಇದನ್ನು ಅಭಿವೃದ್ಧಿಪಡಿಸಿದೆ.