ನವದೆಹಲಿ: ಸ್ವಸಹಾಯ ಸಂಘಗಳ (ಎಸ್‌ಎಚ್‌ಜಿ) ಸದಸ್ಯರಾಗಿರುವ ಮಹಿಳೆಯರು ವಾರ್ಷಿಕವಾಗಿ ₹ 1 ಲಕ್ಷ ಗಳಿಸಲು ಸಾಧ್ಯವಾಗುವಂತೆ ಮಾಡುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ಮಹಿಳಾ
ಸ್ವಸಹಾಯ ಗುಂಪುಗಳ ವಿವಿಧ ಮಾದರಿಗಳ ಕಾರ್ಯನಿರ್ವಹಣೆ ಕುರಿತು ನಡೆಸಲಾದ ಅಧ್ಯಯನ
ಆಧರಿಸಿ ಈ ನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿ ರಾಜ್ಯಗಳಿಗೆ
ಸಲಹೆ-ಸೂಚನೆಗಳನ್ನು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಟಣೆ
ತಿಳಿಸಿದೆ.
'ಮಹಿಳೆಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಬೇಕು ಎಂಬುದೇ ಈ ಕಾರ್ಯಕ್ರಮದ ಗುರಿ. ಗ್ರಾಮೀಣ ಭಾಗದ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ 2.5 ಕೋಟಿ ಮಹಿಳೆಯರಿಗೆ ಎರಡು ವರ್ಷಗಳ ಅವಧಿಗೆ ಈ ಕಾಯಕ್ರಮದಡಿ ನೆರವು ನೀಡಲಾಗುವುದು' ಎಂದೂ ಸಚಿವಾಲಯ ತಿಳಿಸಿದೆ.
'ಜೀವನೋಪಾಯಕ್ಕೆ ಅಗತ್ಯವಿರುವ ಚಟುವಟಿಕೆಗಳಿಗೆ ಒತ್ತು ನೀಡಲಾಗುವುದು. ಇಂಥ ಚಟುವಟಿಕೆಗಳನ್ನು ಕೈಗೊಳ್ಳುವವರು ವರ್ಷಕ್ಕೆ ₹ 1 ಲಕ್ಷ ಗಳಿಸುವುದು ಸಾಧ್ಯವಾಗುವಂತೆ ಮಾಡಲು ನೆರವು ನೀಡಲಾಗುವುದು' ಎಂದು ತಿಳಿಸಿದೆ.
'ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್' ಯೋಜನೆಯಡಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. 70 ಲಕ್ಷ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗಿದ್ದು, 7.7 ಕೋಟಿ ಮಹಿಳೆಯರು ಸದಸ್ಯರಿದ್ದಾರೆ. ಸ್ವಸಹಾಯ ಗುಂಪುಗಳಿಗೆ ನೆರವು ನೀಡುವ ಸಲುವಾಗಿ ವಾರ್ಷಿಕ ₹ 80,000 ಕೋಟಿ ಅನುದಾನ ಒದಗಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.