ತಿರುವನಂತಪುರಂ: ಶಬರಿಮಲೆ ಯಾತ್ರಿಕರಿಗಾಗಿ ನಿರ್ಮಿಸಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ವಿಧಾನಸಭೆಗೆ ತಿಳಿಸಿದರು.
ಕೆಲವು ವಾರಗಳ ಹಿಂದೆ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣದ ಸ್ಥಳದ ಕುರಿತು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಕೆಲವು ವಿಷಯಗಳ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ವಿಮಾನ ನಿಲ್ದಾಣ ಕುರಿತು ಲೂಯಿಸ್ ಬರ್ಗರ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ನೀಡಿರುವ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅವರು ವಿಧಾನಸಭೆಗೆ ತಿಳಿಸಿದರು.
'ತಾಂತ್ರಿಕ- ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ಮತ್ತು ವಿಮಾನ ನಿಲ್ದಾಣ ಯೋಜನೆಯ ಪರಿಸರ ಪರಿಣಾಮ ಅಧ್ಯಯನದ ವರದಿ ಸಲ್ಲಿಸಲು ಆ ಕಂಪನಿಗೆ ವಹಿಸಲಾಗಿದೆ. ಈ ಅಧ್ಯಯನ ವರದಿಗಳು ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಅವರು ಹೇಳಿದರು.
ಈ ಯೋಜನೆಯ ಪ್ರಗತಿಯನ್ನು ವಿವರಿಸಿದ ಅವರು, ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಸ್ವಾಧೀನಪ ಡಿಸಿಕೊಳ್ಳುವುದು ಮತ್ತು ಡಿಪಿಆರ್ ಸಿದ್ಧಗೊಳಿಸುವುದಕ್ಕಾಗಿ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಪತ್ತನಂತಿಟ್ಟ ಜಿಲ್ಲೆಯಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದಕ್ಕೆ 2017ರಲ್ಲಿ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ ಎಂದು ವಿಜಯನ್ ವಿವರಿಸಿದರು.