ನವದೆಹಲಿ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಘಟನೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ 'ರೈಲ್ ರೋಕೋ' ಅಂಗವಾಗಿ ನಿನ್ನೆ ಹಲವು ಪ್ರಮುಖ ಸ್ಥಳಗಳಲ್ಲಿ ರೈಲುಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಜಾಬ್, ಹರಿಯಾಣ ಮತ್ತು ಇತರ ಭಾಗಗಳಲ್ಲಿ ರೈಲು ಹಳಿಗಳ ಮೇಲೆ ರೈತರು ಧರಣಿ ಕೂತಿರುವ ಚಿತ್ರಣ ಕಂಡುಬಂದಿದೆ. ಹಲವೆಡೆ ರೈಲುಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾಯುತ್ತಾ ಕುಳಿತ ದೃಶ್ಯಗಳೂ ಕಂಡುಬಂದಿವೆ.
ಲಖೀಂಪುರ್ ಖೇರಿಯಲ್ಲಿ ನಾಲ್ಕು ಜನ ರೈತರ ಸಾವಿಗೆ ಕಾರಣವಾದ ಕಾರು ಕೇಂದ್ರ ಕಿರಿಯ ಗೃಹ ಸಚಿವ ಅಜಯ್ ಮಿಶ್ರರಿಗೆ ಸೇರಿದ್ದಾದ್ದರಿಂದ ಅವರನ್ನು ಕೂಡಲೇ ವಜಾಗೊಳಿಸಿ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗಾಗಲೇ ಕಾರನ್ನು ಓಡಿಸುತ್ತಿದ್ದ ಆರೋಪ ಎದುರಿಸುತ್ತಿರುವ ಸಚಿವರ ಪುತ್ರ ಆಶಿಶ್ ಮಿಶ್ರ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಬೆಳಿಗ್ಗೆ 10 ರಿಂದ 4 ಗಂಟೆವರೆಗೆ ದೇಶದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಯಾ ಪ್ರದೇಶಗಳ ಜನರು ರೈಲುಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಾರೆ. ಭಾರತ ಸರ್ಕಾರ ಇದುವರೆಗೆ ನಮ್ಮೊಂದಿಗೆ ಮಾತನಾಡಿಲ್ಲ ಎಂದು ರೈತ ಮುಖಂಡ ರಾಕೇಶ್ ತಿಕಾಯತ್ ಇಂದು ಬೆಳಿಗ್ಗೆ ಹೇಳಿಕೆ ನೀಡಿದ್ದಾರೆ.
ನಾರ್ದರ್ನ್ ರೈಲ್ವೇ ಅಧಿಕಾರಿಗಳ ಪ್ರಕಾರ 30 ಸ್ಥಳಗಳಲ್ಲಿ ರೈಲು ತಡೆ ನಡೆದಿದ್ದು, ಈ ನಿಟ್ಟಿನಲ್ಲಿ 8 ರೈಲುಗಳ ಮಾರ್ಗವನ್ನು ನಿಯಂತ್ರಿಸಲಾಗುತ್ತಿದೆ. ಉತ್ತರಪ್ರದೇಶದ ಲಖನೌನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ರೈಲು ತಡೆಯಲ್ಲಿ ಭಾಗವಹಿಸಿ ಜನರಿಗೆ ತೊಂದರೆ ಉಂಟುಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೆ ಫಿರೋಜ್ಪುರ್ ವಿಭಾಗದ ಕೆಲವೆಡೆ ರೈಲು ಸಂಚಾರ ವ್ಯತ್ಯಯವಾಗಿದೆ ಎನ್ನಲಾಗಿದೆ.