ಕುಂಬಳೆ: ಶಿಕ್ಷಕರು ಎಂದಿಗೂ ಸತ್ಯಶೋಧಕರು, ವಿಚಾರ ಪ್ರಚೋದಕರು, ಸಂಸ್ಕಾರ ಪ್ರಚೋದಕರು. ಸಾಹಿತ್ಯ ಪ್ರೀತಿಯ ಅಧ್ಯಾಪಕ ಮಕ್ಕಳೊಳಗಿನ ಪ್ರತಿಭೆಯನ್ನು ಮನಗಂಡು ಅವರ ಸರ್ವಾಂಗೀಣ ವಿಕಾಸಕ್ಕೆ ಪ್ರಯತ್ನಿಸಬಲ್ಲ. ಅಂತಹಾ ಅಧ್ಯಾಪಕರಲ್ಲಿ ವಿ.ಬಿ.ಕುಳಮರ್ವ ಒಬ್ಬರು ಎಂದು ಶಿಕ್ಷಕ, ಸಾಂಸ್ಕøತಿಕ ಸಂಘಟಕ ವಿಶಾಲಾಕ್ಷ ಪುತ್ರಕಳ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಬೀರಂತಬೈಲಿನ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ ವಿಂಶತಿ ವರ್ಷಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕ, ಸಾಹಿತಿ ವಿ.ಬಿ.ಕುಳಮರ್ವ ಅವರ ನಾರಾಯಣಮಂಗಲದಲ್ಲಿರುವ ಸ್ವಗೃಹದಲ್ಲಿ ನಡೆದ ಗುರು ನಮನ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಕೆ.ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಅ|ಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ವಿ.ಬಿ.ಕುಳಮರ್ವ ದಂಪತಿಗಳಿಗೆ ಗುರು ನಮನ ಸಲ್ಲಿಸಿ ಗೌರವಿಸಲಾಯಿತು. ಟಿ.ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಹರಿ ಭಟ್ ಪೆಲ್ತಾಜೆ ಅವರಿಂದ ಗಮಕ ವಾಚನ-ಪ್ರವಚನ ನಡೆಯಿತು. ಪುಟಾಣಿಗಳು ಮತ್ತು ಯುವ ಗಾಯಕರಿಂದ ಭಾವಗೀತೆಗಳ ಅವತರಣಿಕೆ ನಡೆಯಿತು. ಕನ್ನಡ ಭವನ ಗ್ರಂಥಾಲಯವು ಕನ್ನಡ ಭಾಷೆ, ಸಂಸ್ಕøತಿಗೆ ಎರಡು ದಶಕಗಳಿಂದ ನೀಡುತ್ತಿರುವ ಕೊಡುಗೆಗಳ ಬಗ್ಗೆ ವಿ.ಬಿ.ಕುಳಮರ್ವ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಸಂಧ್ಯಾರಾಣಿ ಟೀಚರ್ ಸ್ವಾಗತಿಸಿ, ಕಾರ್ತಿಕ್ ಕಾಸರಗೋಡು ವಂದಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.