HEALTH TIPS

ಕಳೆದುಹೋಗಿದೆ ಮೌನವೆಂಬ ಮಾಣಿಕ್ಯ

                     ಮನುಷ್ಯನ 'ನಾನು' ಎನ್ನುವ ಸ್ವಕೇಂದ್ರಿತ

             ಅಹಂಕಾರವು ಬಹುಶಃ ಹೆಚ್ಚೆಚ್ಚು ಮಾತನಾಡಲು ಪ್ರೇರೇಪಿಸುತ್ತದೆ. ಇದರ ಹಿಂದೆ, ತಾನು ಮಾತಿನ ಮೂಲಕ ಹಂಚಿಕೊಳ್ಳುವ ಆಲೋಚನಾ ಕ್ರಮವನ್ನು ಜಗತ್ತು ಆಲಿಸಬೇಕು ಮಾತ್ರವಲ್ಲ ಒಪ್ಪಬೇಕು ಎನ್ನುವ ಆಗ್ರಹವೂ ಇದೆ. ಹಾಗಾಗಿಯೇ, ಬಹಳಷ್ಟು ಮಂದಿ ಮಾತಿನ ಸ್ಪರ್ಧೆಯಲ್ಲಿಯೇ ಕಾಲಕಳೆಯುತ್ತಾರೆ.

            ಮನುಷ್ಯ ತನಗೆ ಮಾತ್ರ ಮಾತನಾಡಲು ಬರುತ್ತದೆ, ಉಳಿದ ಜೀವರಾಶಿಗಳಿಗೆ ಬರುವುದಿಲ್ಲವೆನ್ನುವ ಗ್ರಹಿಕೆ ಯಿಂದ, ಅವುಗಳನ್ನು ಹಾಗೂ ಸದಾ ಮೌನದ ಧ್ಯಾನ ಸ್ಥಿತಿಯಲ್ಲಿರುವ ಪ್ರಕೃತಿಯನ್ನು ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು, ತನ್ನಿಷ್ಟದಂತೆ ಬಳಸಿಕೊಳ್ಳುತ್ತಿದ್ದಾನೆ. ಒಂದು ರೀತಿಯಲ್ಲಿ, ಇದು ಮನುಷ್ಯನ ಮಾತಿನ ಪ್ರಪಂಚ ಮತ್ತು ಪ್ರಕೃತಿಯ ಮೌನದ ನಡುವಿನ ಸೆಣಸಾಟ. ಸಾಮಾನ್ಯವಾಗಿ ನಾವು ಗಮನಿಸಿದಂತೆ, ಮಾತಿನ ಗದ್ದಲವೆಲ್ಲಾ ಮುಗಿದ ಮೇಲೆ, ಅಂತಿಮವಾಗಿ ಮೌನವೇ ಗೆಲ್ಲುವುದು.

            ಮಾತು ಮನುಷ್ಯ ಮನುಷ್ಯರ ನಡುವೆ ಪ್ರೀತಿ ಹಂಚಿದಷ್ಟೇ ದ್ವೇಷವನ್ನೂ ಬಿತ್ತರಿಸುವುದಿದೆ. ಹಿಂದೆ, ಋಷಿಮುನಿಗಳು ಮೌನವನ್ನು ಅರಸಿಕೊಂಡು ಕಾಡಿನಲ್ಲಿ ತಪಸ್ಸು ಮಾಡುತ್ತಾ ಮನುಷ್ಯ ಜೀವನದ ಒಳಾರ್ಥಗಳನ್ನು ಹುಡುಕಾಡಿರುವುದನ್ನು ಓದಿದ್ದೇವೆ. ತದ್ವಿರುದ್ಧವಾಗಿ, ವರ್ತಮಾನದ ಮಾತಿನ ಪ್ರಪಂಚಕ್ಕೆ ಸಿಕ್ಕ ದೊಡ್ಡ ಉಡುಗೊರೆಯೆಂದರೆ, ಮೊಬೈಲ್ ಫೋನಿನ ಆವಿಷ್ಕಾರ. ಇದಾದ ನಂತರ ಮನುಷ್ಯ ಮಾತ ನಾಡುವುದನ್ನು, ಅಸಂಬದ್ಧ ಹರಟೆಯನ್ನು ನಿಲ್ಲಿಸಿಯೇ ಇಲ್ಲವೆನ್ನಬಹುದು.

ಈ ಸಂದರ್ಭದಲ್ಲಿ ನೆನಪಾಗುವ ಗಾದೆ 'ಮಾತು ಬೆಳ್ಳಿ, ಮೌನ ಬಂಗಾರ'. ಮೌನ ಯಾಕೆ ಬಂಗಾರ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಾಡಿದರೆ, ಮೌನದಲ್ಲಿಯೇ ಮನುಷ್ಯನ ಒಳ ಅರಿವಿನ ದಾರಿ ಅಡಗಿದೆ ಎನ್ನುವ ಸತ್ಯದರ್ಶನವಾಗುತ್ತದೆ. ರಮಣ ಮಹರ್ಷಿ ಹೇಳುವಂತೆ, ಸೊಬಗಿನ ಮಾತಿಗಿಂತ, ಆಲೋಚನಾಮುಕ್ತ ಮೌನ ಸ್ಥಿತಿ ಅತ್ಯುನ್ನತ ಸಾಧನೆ. ಮೌನವೆಂಬ ಭಾಷೆಯು ನಮ್ಮ ಮನಸ್ಸಿನೊಳಗೆ ತೊರೆ ಯಂತೆ ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ನಾವು ಮಾತನಾಡುವುದರ ಮೂಲಕ ಅದರ ಹರಿವಿಗೆ ಅಣೆಕಟ್ಟು ನಿರ್ಮಿಸುತ್ತಿರುತ್ತೇವೆ. ಹಾಗಾಗಿ, ಹೆಚ್ಚಿನ ಸಂದರ್ಭದಲ್ಲಿ ಮಾತು ಅಪ್ರಸ್ತುತ.

ಮಾತಿನ ಮುಂದುವರಿದ ಭಾಗವಾದ ಆಲೋ ಚನಾ ಲಹರಿಯನ್ನು ನಾವು ನಿಲ್ಲಿಸಿದಾಗ ಮಾತ್ರ, ಸಾರ್ವತ್ರಿಕ ಭಾಷೆ ಮೌನದ ಮೂಲಕ ಸರಿಯಾಗಿ
ಬದುಕುವುದು ಹಾಗೂ ಪ್ರಪಂಚವನ್ನು ಅರ್ಥೈಸಿ ಕೊಳ್ಳುವುದು ಸುಲಭವಾಗುತ್ತದೆ. ಹೀಗೆ, ಆಡಂಬರದ ಮಾತಿನ ಪ್ರಪಂಚದ ಹಂಗುಗಳಿಂದ ಬೇರ್ಪಡಿಸಿ ಕೊಂಡ ಮನುಷ್ಯ, ಯಾವಾಗಲೂ ಏಕಾಂತದಲ್ಲಿ ತನ್ನನ್ನು ಅರಿತುಕೊಳ್ಳುತ್ತಾ ನಿಜವಾದ ಆನಂದ
ಅನುಭವಿಸುತ್ತಾನೆ.

            ಇದೇ ತಾತ್ಪರ್ಯವನ್ನು ಪ್ರತಿಬಿಂಬಿಸುವ ಕವನ, ಡಿವಿಜಿಯವರ 'ವನಸುಮದೊಲೆನ್ನ...' ಇದು,
ಮೌನವಾಗಿದ್ದುಕೊಂಡೇ ಸಾಧಿಸುವುದರ ಮಹತ್ವವನ್ನು ತಿಳಿಸುತ್ತದೆ. ಇದು ಮಾತುರಹಿತ ಮೌನವಲ್ಲ. ಬದಲಾಗಿ, ಸ್ಥಿತಪ್ರಜ್ಞ ಮನಸ್ಸಿನ ಮೌನ. ಬಹಳಷ್ಟು ಸಾಧನೆ ಮಾಡಿಯೂ 'ನಾನು' ಎನ್ನುವ ಅಹಂಕಾರ ಮೂಡದ ಮೌನ. ಇದು, ಜೀವನದ ಪರಿಪೂರ್ಣತೆ ಸಾಧಿಸುವ ಹಾದಿಯಲ್ಲಿ ನಿರಂತರವಾಗಿ ನಡೆದಾಗ,   ಜೊತೆಯಾಗುವ ವಿನಮ್ರತೆಯ ಮೌನ.

                ಆದರೆ, ವರ್ತಮಾನದ ಜಗತ್ತು, ಮಾತಿನ ವೈಭೋಗದ ಮೇಲೆ ನಿಂತಿದೆ. ಇಲ್ಲಿ ಮಾತಿನ
ಮಲ್ಲರಿಗಷ್ಟೇ ವಿಶೇಷ ಸ್ಥಾನಮಾನ. ಸ್ವಯಂ ಮೌಲ್ಯಮಾಪನ ಮಾಡಿ, ನಮ್ಮ ಸಾಧನೆಯನ್ನು ಘಂಟಾ ಘೋಷವಾಗಿ ಹೇಳಿಕೊಂಡರಷ್ಟೇ ಜಗತ್ತಿನ ಎಲ್ಲಾ ಬಿರುದಾವಳಿಗಳು ಸಿಗುತ್ತವೆ. ಹಾಗಾಗಿಯೇ, ಸದಾ ವೇದಿಕೆಯಲ್ಲಿರಲು ಇಚ್ಛಿಸುವ ಬಹುತೇಕ ಮಂದಿ, ಮಾತನ್ನೇ ಬಂಡವಾಳವಾಗಿಸಿಕೊಂಡು ಪ್ರಾಪಂಚಿಕ ಯಶಸ್ಸು ಗಳಿಸುವುದನ್ನು ನಾವು ಕಾಣಬಹುದು.

          ಈ ಮಾತಿನ ಅಬ್ಬರದ ನಡುವೆಯೂ, ಬದುಕನ್ನು ಅರ್ಥವತ್ತಾಗಿ ಬಾಳಬೇಕೆನ್ನುವವರಿಗೆ ಮಾತಿನ ಅಗತ್ಯ ಅಷ್ಟು ಕಂಡುಬರುವುದಿಲ್ಲ. ಹಾಗಿದ್ದಲ್ಲಿ, ಮಾತಿನ ಆರ್ಭಟದ ನಡುವೆ ಮೌನದ ಮಹತ್ವವನ್ನು ಅರಿಯುವುದಾದರೂ ಹೇಗೆ?

            ಡಿವಿಜಿಯವರು, 'ಕಾಡಿನಲ್ಲಿ ಸದ್ದುಗದ್ದಲವಿಲ್ಲದೆ ಅರಳುವ ಹೂವೊಂದು, ತನ್ನ ಸುತ್ತಲಿನ ಜಗತ್ತಿಗೆ ಮೌನವಾಗಿ ಸುವಾಸನೆಯನ್ನು ಪಸರಿಸುವ ಹಾಗೆ, ನನ್ನ ಜೀವನ ಕೂಡ ಮಾತಿನ ಅಬ್ಬರವಿಲ್ಲದೆ, ಮೌನದಲ್ಲಿ ನಿರಂತರವಾಗಿ ವಿಕಸಿಸುವುದಕ್ಕೆ, ನನ್ನ ಮನವನ್ನು ಅಣಿಗೊಳಿಸು' ಎಂದು ಗುರುಸ್ವರೂಪನಾದ ಭಗವಂತನಲ್ಲಿ ಮೊರೆಯಿಡುತ್ತಾರೆ. ಇಲ್ಲಿ, ಸಹಜವಾಗಿ ಮಾತಿನ ಹೊಗಳಿಕೆ ಕೇಳಬಯಸುವ ಮನಸ್ಸನ್ನು, ಮೌನಕ್ಕೆ ಅಣಿಗೊಳಿಸುವುದು ಬಹಳ ಸಾಹಸದ ಕೆಲಸವೇ ಸರಿ. ಹಾಗೆಯೇ, 'ನಾನು ಗಳಿಸಿದ ಜ್ಞಾನದಿಂದ ಜಗತ್ತಿಗೆ ಸಂತೋಷವನ್ನು ಕೊಡುತ್ತಿದ್ದೇನೆ ಎನ್ನುವ ಅಹಂಕಾರವನ್ನು ಕಿತ್ತೊಗೆದು, ಜಗದ ಹೊಗಳಿಕೆಗೆ ಹಿಗ್ಗಿ ಅದರಲ್ಲಿಯೇ ಕಳೆದು ಹೋಗದಂತಹ
ವಿನಮ್ರತೆಯನ್ನು ದಯಪಾಲಿಸು' ಎನ್ನುತ್ತಾರೆ.

                  ಈ ತೋರಿಕೆಯ ಪ್ರಪಂಚದಲ್ಲಿ, ಮಾತಿನ ಬಂಡ ವಾಳದ ಮೇಲೆ ಜಗತ್ತಿನ ಬಹುತೇಕ ವ್ಯವಹಾರಗಳು ನಡೆಯುತ್ತವೆ. ಆದರೆ, ಮೌನವೆನ್ನುವುದು ನಿಜವಾದ ಸಾಧಕನ ಶ್ರೇಷ್ಠ ಗುಣ. ಯಾಕೆಂದರೆ, ತನ್ನ ಸಾಧನೆ ಯನ್ನು ಮಾತಿನ ಡಂಗುರ ಹೊಡೆಸದೆ, ಜಗತ್ತಿನ ಯಾವುದೇ ಫಲಾಪೇಕ್ಷೆಯಿಲ್ಲದೆ, ಮೌನವಾಗಿ ಸಾಧಿಸು ವುದರಲ್ಲಿಯೇ ಜೀವನದ ಅರ್ಥ ಹಾಗೂ ಆನಂದ ಕಂಡುಕೊಳ್ಳುವುದನ್ನು ಸಿದ್ಧಿಸಿಕೊಳ್ಳುವುದು, ಅಷ್ಟು ಸುಲಭವಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries