ತಿರುವನಂತಪುರ: ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಯಾವುದೇ ದಾಖಲೆಯು ನಕಲಿ ಹಸ್ತಪ್ರತಿಯ ಉಲ್ಲೇಖವನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್. ವಾಸು ಶುಕ್ರವಾರ ಹೇಳಿದ್ದಾರೆ.
'ಶಬರಿಮಲೆ ಆಚರಣೆಗಳಿಗೆ ಸಂಬಂಧಿಸಿದಂತೆ ವಿವಾದಿತ 'ಚೆಂಬೋಲಾ'ವನ್ನು (ತಾಮ್ರದ ಹಸ್ತಪ್ರತಿ) ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಸಾಕ್ಷಿಯಾಗಿ ಸಲ್ಲಿಸಲಾಗಿದೆಯೇ ಎಂಬುದರ ಬಗ್ಗೆ ನನಗೆ ಅರಿವಿಲ್ಲ' ಎಂದು ಅವರು ಹೇಳಿದ್ದಾರೆ.
''ಟಿಡಿಬಿ ಬಳಿ ಅಂಥ ಯಾವುದೇ ದಾಖಲೆ ಇಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಯಾವುದೇ ದಾಖಲೆಯು 'ಚೆಂಬೋಲಾ' ಬಗ್ಗೆ ಉಲ್ಲೇಖವನ್ನು ಹೊಂದಿದೆಯೇ ಎಂಬುದನ್ನು ಪರೀಕ್ಷಿಸಲು ನಿರ್ದೇಶನ ನೀಡಿದ್ದೇನೆ'' ಎಂದು ಅವರು ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಜನರನ್ನು ವಂಚಿಸಲು ನಕಲಿ ಹಸ್ತಪ್ರತಿಯನ್ನು ಬಳಸಿದೆ ಎಂದು ಕೇರಳದ ವಿರೋಧ ಪಕ್ಷಗಳು ಇತ್ತೀಚೆಗೆ ಆರೋಪಿಸಿದ್ದವು. ಈ ಆರೋಪವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೆಲ ದಿನಗಳ ಹಿಂದೆಯಷ್ಟೇ ತಿರಸ್ಕರಿಸಿದ್ದರು. ಇದಾದ ಕೆಲ ದಿನಗಳಲ್ಲಿಯೇ ಟಿಡಿಬಿ ಮುಖ್ಯಸ್ಥರ ಪ್ರತಿಕ್ರಿಯೆ ಬಂದಿದೆ.
ಇತ್ತೀಚೆಗೆ ಬಂಧನಕ್ಕೊಳಗಾದ ಪುರಾತನ ವಸ್ತುಗಳ ಮಾರಾಟದ ವ್ಯಾಪಾರಿ ಮಾನ್ಸನ್ ಮಾವುಂಕಲ್ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿನ ಧಾರ್ಮಿಕ ವಿಧಿ ವಿಧಾನಗಳ ಕುರಿತು ಜನರನ್ನು ವಂಚಿಸಲು ಯತ್ನಿಸಿದ್ದಾರೆ. ಅವರೊಂದಿಗೆ ಮಾರ್ಕ್ಸ್‌ವಾದಿ ಸರ್ಕಾರದ ಪಾತ್ರವೂ ಇದೆ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಮಂಗಳವಾರ ಆರೋಪಿಸಿದ್ದವು.
'ಶಬರಿಮಲೆಯಲ್ಲಿನ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಸರ್ಕಾರವು ನಕಲಿ ಹಸ್ತಪ್ರತಿಯನ್ನು ತಯಾರಿಸಿ ಜನರನ್ನು ವಂಚಿಸಲು ಪ್ರಯತ್ನಿಸಿದೆ ಎಂಬ ಆರೋಪವು ಆಧಾರರಹಿತವಾಗಿದೆ. ಇಂತಹ ಎಲ್ಲಾ ವಿಷಯಗಳು ಅಪರಾಧ ವಿಭಾಗದ ವಿಚಾರಣೆಯ ವ್ಯಾಪ್ತಿಗೆ ಬರುವುದರಿಂದ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಈಗ ಸಾಧ್ಯವಿಲ್ಲ' ಎಂದು ವಿಜಯನ್ ಪ್ರತಿಕ್ರಿಯಿಸಿದ್ದರು.
ಆರೋಪಿ ಬಳಿ ಪತ್ತೆಯಾಗಿರುವ ಪುರಾತನ ವಸ್ತುಗಳು ಮತ್ತು ಬರಹಗಳ ಪ್ರಾಚೀನತೆ ಕುರಿತು ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಮಾವುಂಕಲ್ ಅವರನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.
ಮಾವುಂಕಲ್ ಹೊಂದಿರುವ 'ಚೆಂಬೋಲಾ', ಅಯ್ಯಪ್ಪ ದೇವಸ್ಥಾನದ ಮಾಲೀಕತ್ವ ಮತ್ತು ಆಚರಣೆಗಳ ಬಗ್ಗೆ ಉಲ್ಲೇಖಗಳನ್ನು ಹೊಂದಿದೆ ಎಂದು ಕೆಲ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.
ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಯುವತಿಯರಿಗೆ ಅವಕಾಶ ಕಲ್ಪಿಸುವುದಕ್ಕೆ ಪೂರಕವಾಗಿ ತನ್ನ ವಾದಗಳನ್ನು ಬೆಂಬಲಿಸಲು ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನಕಲಿ ದಾಖಲೆಯನ್ನು ಸಾಕ್ಷಿಯಾಗಿ ಬಳಸಿದೆಯೇ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಪಂಡಲಂ ರಾಜಮನೆತನದವರು ಆಗ್ರಹಿಸಿದ್ದಾರೆ.