ಬೆಂಗಳೂರು: ಬದುಕಿ ಬೆಳಗಬೇಕಿದ್ದ ವಯಸ್ಸಿನಲ್ಲಿ ಹಠಾತ್ ನಿರ್ಗಮನ ಘೋಷಿಸಿ ಕನ್ನಡ ಕುಲಕೋಟಿ ಜನರನ್ನು ದುಃಖದ ಕಡಲಿನಲ್ಲಿ ಮುಳುಗಿಸಿದ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಪುನೀತ್'ಗೆ ಕಣ್ಣೀರ ವಿದಾಯ ಹೇಳಿದರು.
ಮೂರು ವರ್ಷದ ಹಿಂದೆಯಷ್ಟೇ ಗೋವಿಂದ ನಾಮ ಸ್ಮರಣೆಯೊಂದಿಗೆ ದಾಸಯ್ಯನ ಪದ್ಧತಿಯಂತೆ ಪುನೀತ್ ರಾಜ್ ಕುಮಾರ್ ಅವರು ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ್ದರು. ಹಠಾತ್ ಹೃದಯ ಸ್ತಂಭನದಿಂದ ಅಕಾಲಿಕ ನಿಧನ ಹೊಂದಿರುವ ಪುನೀತ್ ಅವರು ತಂದೆ, ತಾಯಿ ಪಕ್ಕದಲ್ಲೇ ಇದೀಗ ಚಿರಸ್ಥಾಯಿಯಾಗಿದ್ದಾರೆ.
ಪುನೀತ್ ಅವರ ಅಂತ್ಯಸಂಸ್ಕಾರವು ಈಡಿಗ ಸಂಪ್ರದಾಯದಂತೆ ನೆರವೇರಿದ್ದು, ಕರುನಾಡಿನ ಯುವರತ್ನ ಭೂತಾಯಿ ಮಡಿಲು ಸೇರಿದ್ದಾರೆ.
ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ಸಹೋದರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಚಿತ್ರರಂಗ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿ ಆಗಿದ್ದರು. ಕಂಠೀರವ ಸ್ಟುಡಿಯೋ ಆವರಣದ ಒಳಗೆ ಕುಟುಂಬದವರಿಗೆ ಮತ್ತು ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮುನಿರತ್ನ, ರಾಕ್ಲೈಕ್ ವೆಂಕಟೇಶ್, ಕಿಚ್ಚ ಸುದೀಪ್, ರವಿಚಂದ್ರನ್ ಮುಂತಾದವರು ಸ್ಥಳದಲ್ಲಿದ್ದು, ಪುನೀತ್ಗೆ ಅಂತಿಮ ವಿಧಾಯ ಹೇಳಿದ್ದಾರೆ. ಡಾ. ರಾಜ್ಕುಮಾರ್ ಸಮಾಧಿಯಿಂದ 125 ಅಡಿ ಅಂತರ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗ ಜಮಾಯಿಸಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕಂಠೀರವ ಸ್ಟೇಡಿಯಂನಿಂದ ಪುನೀತ್ ರಾಜ್ಕಮಾರ್ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ಹಣೆಗೆ ಮುತ್ತಿಟ್ಟು ಕಂಬನಿ ಮಿಡಿದರು.