ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ 2020-21ನೇ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಹಾಗೂ ಪ್ಲಸ್‍ಟು ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಶಾಲೆಯಲ್ಲಿ ಜರಗಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಪಡೆದ 31 ವಿದ್ಯಾರ್ಥಿಗಳನ್ನು, ಒಂಬತ್ತು ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದ ಹದಿನೆಂಟು ವಿದ್ಯಾರ್ಥಿಗಳನ್ನು ಹಾಗೂ ಹೈಯರ್ ಸೆಕೆಂಡರಿ ಶಾಲೆಯ ವಾಣಿಜ್ಯ, ಹ್ಯೂಮಾನಿಟೀಸ್ ವಿಭಾಗಗಳಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಅಶೋಕನ್ ಅವರ ರಕ್ಷಕರಾದ ನಾರಾಯಣಿ ಅಮ್ಮ ಹಾಗೂ ಕಣ್ಣನ್ ಅವರ ಸ್ಮರಣಾರ್ಥ ಉನ್ನತಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು. ಇದರೊಂದಿಗೆ ಮೇಪೋಡು ಸುಬ್ರಾಯ ಮಯ್ಯ ದತ್ತಿನಿಯನ್ನು ಕನ್ನಡ ಮಾಧ್ಯಮದಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಎನ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ವ್ಯವಸ್ಥಾಪಕ ಎನ್. ಶಂಕರನಾರಾಯಣ ಭಟ್, ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಎನ್. ರಾಮಚಂದ್ರ ಭಟ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಎನ್. ಮಹಾಲಿಂಗ ಭಟ್, ವ್ಯವಸ್ಥಾಪಕಿ ವಿಜಯಶ್ರೀ, ಹೈಯರ್ ಸೆಕೆಂಡರಿ ಶಿಕ್ಷಕ ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಪ್ರೌಢಶಾಲಾ ಶಿಕ್ಷಕ ಶಶಿಕುಮಾರ್ ಪಿ., ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಜೋನ್ ಡಿಸೋಜ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಜಲಜಾಕ್ಷಿ ಶುಭಾಶಂಸನೆಗೈದರು.ಈಶ್ವರಿ ಡಿ. ಪ್ರಾರ್ಥನೆ ಹಾಡಿದರು. ಉಮಾದೇವಿ ಎಂ. ಎಲ್. ಸ್ವಾಗತಿಸಿ, ಶ್ವೇತ ಕುಮಾರಿ ಎಂ. ವಂದಿಸಿದರು. ಶಿವಪ್ರಸಾದ್ ಸಿ. ಹಾಗೂ ಪ್ರಶಾಂತ್ ಹೊಳ್ಳ ಎನ್. ಕಾರ್ಯಕ್ರಮ ನಿರೂಪಿಸಿದರು.