ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಕೇರಳದಲ್ಲಿ ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.
ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪಿಣರಾಯಿ ವಿಜಯನ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ, 'ಇದು ಆರಂಭದಿಂದಲೂ ಎಡ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿಲುವು. ಕೇರಳದಲ್ಲಿ ಸಿಎಎ ಕಾರ್ಯರೂಪಕ್ಕೆ ತರುವುದಿಲ್ಲ' ಎಂದು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
'ನಮ್ಮ ರಾಷ್ಟ್ರದಲ್ಲಿ ಧರ್ಮಗಳ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ಒಂದು ಧರ್ಮಕ್ಕೆ ಸೇರಿದ ಕಾರಣವನ್ನು ಮುಂದಿಟ್ಟುಕೊಂಡು ಪೌರತ್ವವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಧರ್ಮಗಳಲ್ಲಿ ನಂಬಿಕೆ ಇಡುವುದು ಮತ್ತು ಇಡದೇ ಇರುವುದು ಪ್ರತಿಯೊಬ್ಬನ ಹಕ್ಕು' ಎಂದು ಪಿಣರಾಯಿ ವಿಜಯನ್ ಪ್ರತಿಪಾದಿಸಿದರು.
'ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜಿಸಲು ಕೇಂದ್ರ ಸರ್ಕಾರ ಸಿಎಎಯನ್ನು ತಂದಿದೆ. ರಾಷ್ಟ್ರದೆಲ್ಲೆಡೆ ವ್ಯಕ್ತವಾಗುತ್ತಿರುವ ಪ್ರಬಲ ಪ್ರತಿಭಟನೆಗಳು ಸಿಎಎಗೆ ವಿರೋಧ ಇರುವುದಕ್ಕೆ ಸಾಕ್ಷಿ. ಇಂತಹ ವಿಚಾರಗಳಲ್ಲಿ ಎಡ ಪಕ್ಷಗಳ ನಿಲುವುದು ಎಂದಿಗೂ ಒಂದೇ ಆಗಿರಲಿದೆ. ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇದೆ. ರಾಜ್ಯದಲ್ಲಿ ಸಿಎಎಯನ್ನು ಕಾರ್ಯರೂಪಕ್ಕೆ ತರಲು ಸಿದ್ಧರಿಲ್ಲ' ಎಂದರು.
ನಮ್ಮ ನಿರ್ಧಾರದ ಕುರಿತು ಕೆಲವರು, ಕೇಂದ್ರ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ಒಂದು ರಾಜ್ಯ ಹೇಗೆ ಕಾರ್ಯರೂಪಕ್ಕೆ ತರದೆ ಇರಲು ಸಾಧ್ಯ ಎಂದೆಲ್ಲ ತಮಾಷೆ ಮಾಡಿದ್ದರು. ಅಂದು ಇದೇ ನಿರ್ಧಾರ ತೆಗೆದುಕೊಂಡಿದ್ದೆವು. ಇಂದು ಕೂಡ ಇದೇ ನಿರ್ಧಾರಕ್ಕೆ ಕಟಿಬದ್ಧರಾಗಿದ್ದೇವೆ. ನಾಳೆಯೂ ಇದೇ ನಿರ್ಧಾರವನ್ನು ತಳೆಯುತ್ತೇವೆ. ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಸಿಎಂ ಪುನರುಚ್ಚರಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.