ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್ ಎಂಬುವರು ಕೇವಲ ಒಂದೇ ಒಂದು ಮತವನ್ನು ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿದ್ದಾರೆ. ತಮ್ಮ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರು ಸಹ ಕೇವಲ ಒಂದೇ ಒಂದು ಮತ ಪಡೆದಿರುವುದು ಬಿಜೆಪಿ ಅಭ್ಯರ್ಥಿ ಪಾಲಿಗೆ ದುರಂತದ ಸಂಗತಿ ಆಗಿದೆ.
ಕೊಯಮತ್ತೂರು ಜಿಲ್ಲೆಯ ಪೆರಿಯಾನೈಕೆನ್ಪಾಳ್ಯಂ ಯೂನಿಯನ್ನಿಂದ ವಾರ್ಡ್ ಸದಸ್ಯ ಚುನಾವಣೆಗೆ ಕಾರ್ತಿಕ್ ಸ್ಪರ್ಧಿಸಿದ್ದರು. ಕೇವಲ ಒಂದೇ ಒಂದು ಮತ ಪಡೆಯುತ್ತಿದ್ದಂತೆ ಟ್ವಿಟರ್ನಲ್ಲಿ #Single_Vote_BJP ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿ, ಬಿಜೆಪಿ ವಿರುದ್ಧ ಸಾಕಷ್ಟು ವ್ಯಂಗ್ಯ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮೀನಾ ಕಂದಸ್ವಾಮಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದೇ ಒಂದು ಮತ ಪಡೆದಿದ್ದಾರೆ. ಬೇರೆಯವರಿಗೆ ಮತ ಹಾಕಲು ನಿರ್ಧರಿಸಿದ ಅವರ ಕುಟುಂಬದ ಇತರೆ ನಾಲ್ವರು ಎಲ್ಲರ ಹೆಮ್ಮೆ ಎನಿಸಿದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಅ. 6 ರಿಂದ 9ರವರೆಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದೆ. ಒಟ್ಟು 27,003 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 79,433 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾರ್ತಿಕ್ ಅವರು ತುಂಬಾ ಪ್ರಚಾರ ನಡೆಸಿದ್ದರು. ಆದರೆ, ಕೇವಲ ಒಂದು ಮತವನ್ನು ಮಾತ್ರ ಪಡೆದುಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇದು ನಿರಂತರ ಬೆಲೆ ಏರಿಕೆಯ ಪರಿಣಾಮ ಎಂಬ ಚರ್ಚೆಗಳು ಜಾಲತಾಣದಲ್ಲಿ ನಡೆಯುತ್ತಿದೆ.