ನವದೆಹಲಿ: ಲೈಂಗಿಕ ಅಪರಾಧ ಪ್ರಕರಣಗಳ ವಿಚಾರಣೆ ಹಾಗೂ ನ್ಯಾಯ ದಾನ ಪ್ರಕ್ರಿಯೆಗೆ ವೇಗ ನೀಡುವ ಸಲುವಾಗಿ ವಿಶೇಷ ತ್ವರಿತ ನ್ಯಾಯಾಲಯಗಳ (ಎಫ್‌ಟಿಎಸ್‌ಸಿ) ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ-2018ನ್ನು ಅಂಗೀಕರಿಸಿದ ನಂತರ, 1,023 ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಎರಡು ವರ್ಷಗಳ ಹಿಂದೆ ಗಾಂಧಿ ಜಯಂತಿಯಂದು ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು.
ರಾಜ್ಯಗಳಿಗೆ ಅವುಗಳ ಬೇಡಿಕೆಯಂತೆ ಎಫ್‌ಟಿಎಸ್‌ಸಿಗಳನ್ನು ಹಂಚಿಕೆಯನ್ನೂ ಮಾಡಲಾಗಿದೆ. ಈ ಪೈಕಿ 389 ನ್ಯಾಯಾಲಯಗಳು ಪೊಕ್ಸೊ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲಿವೆ.
ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಈ ನ್ಯಾಯಾಲಯಗಳಿಗೆ ನಿರ್ಭಯಾ ನಿಧಿಯಿಂದ ಅನುದಾನ ಒದಗಿಸಲಾಗುತ್ತದೆ.
'ಹಂಚಿಕೆಯಾಗಿರುವ ಎಫ್‌ಟಿಎಸ್‌ಸಿಗಳ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸದಾಗಿ ಪತ್ರ ಬರೆಯಲಾಗಿದೆ' ಎಂದು ಸಚಿವಾಲಯದ ಮೂಲಗಳು ಹೇಳಿವೆ.
ಪಶ್ಚಿಮ ಬಂಗಾಳಕ್ಕೆ 123 ಎಫ್‌ಟಿಎಸ್‌ಸಿಗಳ ಹಂಚಿಕೆಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಒಂದು ಹಾಗೂ ಅರುಣಾಚಲ ಪ್ರದೇಶದಲ್ಲಿ ಮೂರು ಎಫ್‌ಟಿಎಸ್‌ಸಿಗಳ ಸ್ಥಾಪನೆಗೆ ಕೇಂದ್ರ ನಿರ್ಧರಿಸಿದೆ.
ಆದರೆ, ಲೈಂಗಿಕ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಕಾರಣ ರಾಜ್ಯದಲ್ಲಿ ಸದ್ಯಕ್ಕೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಆರಂಭಿಸುವ ಅಗತ್ಯ ಇಲ್ಲ ಎಂದು ಅರುಣಾಚಲಪ್ರದೇಶ ಸರ್ಕಾರ ಕೇಂದ್ರ ಕಾನೂನು ಸಚಿವಾಲಯಕ್ಕೆ ತಿಳಿಸಿದೆ.
ಗೋವಾಕ್ಕೆ ಎರಡು ನ್ಯಾಯಾಲಯಗಳ ಹಂಚಿಕೆಯಾಗಿದ್ದು, ಒಂದು ಎಫ್‌ಟಿಎಸ್‌ಸಿ ಸ್ಥಾಪನೆಗೆ ರಾಜ್ಯ ಸರ್ಕಾರ ಸಮ್ಮತಿಸಿದೆ. ಆದರೆ, ಈ ನ್ಯಾಯಾಲಯ ಇನ್ನೂ ಕಾರ್ಯಾಚರಣೆ ಆರಂಭಿಸಬೇಕಿದೆ.
ಇನ್ನೂ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಫ್‌ಟಿಎಸ್‌ಸಿಗಳ ಕಾರ್ಯಾರಂಭವಾಗಬೇಕಿದೆ ಎಂದು ಮೂಲಗಳು ಹೇಳಿವೆ.