ಬದಿಯಡ್ಕ: ಜಗತ್ತಿನ ಸಕಲ ದುರಿತಗಳನ್ನೂ ನಿವಾರಿಸುವ ಶಕ್ತಿ ಜಗಜ್ಜನನಿ ಶ್ರೀದೇವಿಗಿದೆ. ಇಂದು ಎದುರಾಗಿರುವ ಸವಾಲುಗಳಿಂದ ಮುಕ್ತರಾಗಿ ಸಹಜ ಜೀವನದತ್ತ ಮರಳುವಲ್ಲಿ ದೇವರ ಕೃಷೆಗೆ ತುಡಿಯುವ ಅಗತ್ಯ ಇದೆ ಎಂದು ಶ್ರೀಕ್ಷೇತ್ರ ಕೊಲ್ಲಂಗಾನದ ತಂತ್ರಿವರ್ಯ ಶ್ರೀ ಗಣಾಧಿರಾಜ ಉಪಾಧ್ಯಾಯ ಅವರು ತಿಳಿಸಿದರು.
ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀದುರ್ಗಾಪರಮೇಶ್ವರಿ ಕೃಪಾಪೋಶಿತ ಯಕ್ಷಗಾನ ಮಂಡಳಿ ಕೊಲ್ಲಂಗಾನ ಹಾಗೂ ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ಆಯೋಜಿಸಲಾದ ನವರಾತ್ರಿ ಸಾಂಸ್ಕøತಿಕ ಸಂಜೆ ಕಾರ್ಯಕ್ರಮವನ್ನು ಗುರುವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕ,ಸಾಮಾಜಿಕ ಮುಂದಾಳು ವೇಣುಗೋಪಾಲ ತತ್ವಮಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಕೊಲ್ಲಂಗಾನ ಕ್ಷೇತ್ರದ ವೈದಿಕ, ತಾಂತ್ರಿಕ ಶಕ್ತಿಗಳು ಅನೇಕ ಆರ್ತರ ಸಂಕಷ್ಟಗಳನ್ನು ನಿವಾರಿಸುವಲ್ಲಿ ಮಹತ್ತರ ಸಾಧನೆ ಮೆರೆಯುತ್ತಿದೆ. ಯುವಜನರಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆಗಳನ್ನು ಮೂಡಿಸುವಲ್ಲಿ ಶ್ರೀಕ್ಷೇತ್ರದ ವೈವಿಧ್ಯಮಯ ಚಟುವಟಿಕೆ ಅನುಸರಣೀಯ. ಯಕ್ಷಗಾನ ಕಲಾ ಪ್ರಕಾರದ ಮೂಲಕ ಕಲೆ, ಕಲಾವಿದರ ಆಶೋತ್ತರಗಳ ಜೊತೆಗೆ ಕಲಾಪ್ರೇಮಿಗಳ ಹತ್ತಿರಕ್ಕೆ ಪರಂಪರೆಯ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಮುಖಂಡ ಮಂಜುನಾಥ ಡಿ.ಮಾನ್ಯ, ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ರವಿಶಂಕರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ಸುಮನ್ ರಾಜ್ ನೀಲಂಗಳ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪದ್ಮಪ್ರಿಯ ಕಲ್ಲೂರಾಯ, ಮನೀಶ ಪಾಟಾಳಿ ಅವರಿಂದ ಯಕ್ಷ ಗಾಯನ ನಡೆಯಿತು. ರವಿಶಂಕರ ಶೆಟ್ಟಿ ಕೊಲ್ಲಂಗಾನ ಹಾಗೂ ಪ್ರಣಮ್ ರೆಂಜಾಳ ಹಿಮ್ಮೇಳದಲ್ಲಿ ಸಹಕರಿಸಿದರು.