ಕೊಟ್ಟಾಯಂ: ನಡುರಸ್ತೆಯಲ್ಲಿ ಸಹಪಾಠಿ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಂದು ಹಾಕಿರುವ ಘಟನೆ ನೆರೆಯ ಕೇರಳದಲ್ಲಿ ನಡೆದಿದೆ.
ಕೇರಳದ ಕೊಟ್ಟಾಯಂ ನಲ್ಲಿ ಈ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿನಿಯನ್ನು 22 ವರ್ಷದ ವಿದ್ಯಾರ್ಥಿನಿ ವೈಕಂನ ಕಲಪ್ಪುರಕ್ಕಲ್ ನಿವಾಸಿ ನಿತಿನಮೋಲ್ ಎಂದು ಗುರುತಿಸಲಾಗಿದೆ. ಅಂತೆಯೇ ಆಕೆಯನ್ನು ಕೊಂದು ಹಾಕಿದ ವ್ಯಕ್ತಿಯನ್ನು 21 ವರ್ಷದ ಅಭಿಷೇಕ್ ಬೈಜು ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ನಿತಿನಮೋಲ್ ಮತ್ತು ಅಭಿಷೇಕ್ ಬೈಜು ಪರೀಕ್ಷೆ ಮುಗಿಸಿ ಮನೆಗೆ ಇಬ್ಬರೂ ಜೊತೆಯಾಗಿಯೇ ಹೋಗುತ್ತಿದ್ದರು. ಈ ವೇಳೆ ಅಭಿಷೇಕ್ ಬೈಜು ಆಕೆಯನ್ನು ಕೆಳಗೆ ತಳ್ಳಿ ತನ್ನ ಬಳಿ ಇದ್ದ ಪೆನ್ ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾನೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಭಿಷೇಕ್ ಬೈಜುನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ತೀವ್ರ ರಕ್ತಸ್ರಾವದಲ್ಲಿ ಬಿದ್ದಿದ್ದ ನಿತಿನಮೋಲ್ ಳನ್ನು ಆಯಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸಿದರಾದರೂ ಮಾರ್ಗ ಮಧ್ಯೆ ಆಕೆಯ ಸಾವನ್ನಪ್ಪಿದ್ದಳು ಎಂದು ಹೇಳಲಾಗಿದೆ.
ಈ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.. ಆದರೆ ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಸ್ನೇಹಿತರು ಹೇಳುವಂತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಈ ಬಗ್ಗೆ ಉಂಟಾದ ಜಗಳದಲ್ಲಿ ಕೊಲೆಯಾಗಿರಬಹುದು ಎಂದು ಶಂಕಿಸಿದ್ದಾರೆ.
ಮೃತ ನಿತಿನಮೋಲ್ ಮತ್ತು ಬಂಧಿತ ವ್ಯಕ್ತಿ ಅಭಿಷೇಕ್ ಬೈಜು ಇಬ್ಬರೂ ಕೊಟ್ಟಾಯಂನ ಸೈಂಟ್ ಥಾಮಸ್ ಕಾಲೇಜಿನಲ್ಲಿ ಬಿ ವೋಕ್ ಫುಡ್ ಪ್ರೊಸೆಸಿಂಗ್ ತಂತ್ರಜ್ಞಾನದ ವಿದ್ಯಾರ್ಥಿಗಳಾಗಿದ್ದರು. ಅವರ ಅಂತಿಮ ವರ್ಷದ ಪರೀಕ್ಷೆಗಾಗಿ ಕಾಲೇಜಿಗೆ ಹಾಜರಾಗಿದ್ದರು ಎಂದು ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಾಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಾಲ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕೊಟ್ಟಾಯಂ ಜಿಲ್ಲಾ ಪೊಲೀಸ್ ಮುಖ್ಯಸ್ಥೆ ಶಿಲ್ಪಾ ದೇವಯ್ಯ ಘಟನೆಯ ನೇರ ವಿವರ ಪಡೆಯಲು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.