ಕುಂಬಳೆ: ಕೋವಿಡ್ ಪಿಡುಗು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿರುವಂತೆ ಜನಜೀವನ ಈ ಹಿಮದಿನ ಸಹಜ ಜೀವನಕ್ಕೆ ದೌಡಾಯಿಸುತ್ತಿದ್ದು, ಜೊತೆಗೆ ಸಮಾಜ ಘಾತುಕ ಚಟುವಟಿಕೆಗಳೂ ಮತ್ತೆ ಸಕ್ರಿಯಗೊಳ್ಳುತ್ತಿವೆ.
ಕುಂಬಳೆ ಪೇಟೆ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ, ಒಂದಂಕಿ ಜೂಜಿನಂತಹ ಕಾನೂನು ಬಾಹಿರ ಚಟುವಟಿಕೆಗಳು ತೀವ್ರಗೊಂಡಿರುವುದು ಕಂಡುಬಂದಿದೆ. ಕುಂಬಳೆ ಕೇಂದ್ರ ಮೈದಾನ ಸಮೀಪ ಹಾದುಹೋಗುವ ಹೈಸ್ಕೂಲು ರಸ್ತೆ ಬದಿಯಲ್ಲಿ ಅಟೋ ರಿಕ್ಷಾ ಬಳಸಿ ಹೈಟೆಕ್ ಮದ್ಯ ಮಾರಾಟ ಬಿರುಸುಗೊಂಡಿದೆ. ಬೆಳಿಗ್ಗೆಯೇ ಆಗಮಿಸುವ ಖಾಸಗೀ ಬಳಕೆಯ ಅಟೋ ರಿಕ್ಷಾವೊಂದರಲ್ಲಿ ಅಕ್ರಮ ಮದ್ಯ ಮಾರಾಟ ಗಮನಕ್ಕೆ ಬಂದಿದೆ. ಅಟೋ ವನ್ನು ಟಾರ್ಪಲ್ ನಿಂದ ಮುಚ್ಚಿದ್ದು, ಮೈದಾನ ಭಾಗದ ಅಟೋದ ಮತ್ತೊಂದು ಬದಿಯ ಮರೆಯಲ್ಲಿ ಮದ್ಯಮಾರಾಟ ಮಾಡಲಾಗುತ್ತಿದೆ. ಇದೇ ಪರಿಸರದ ಗೂಡಂಗಡಿಯ ಹಿಂಬದಿ ಒಂದಂಕಿ ಲಾಟರಿ, ಜೂಜುಗಳೂ ನಡೆಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ನವೆಂಬರ್ 1 ರಿಂದ ರಾಜ್ಯಾದ್ಯಂತ ಮತ್ತೆ ಶಿಕ್ಷಣ ಸಂಸ್ಥೆಗಳು ತೆರೆಯಲು ಸಿದ್ದತೆಗಳು ನಡೆಯುತ್ತಿದ್ದು, ಶಾಲಾ ಪರಿಸರದಲ್ಲಿ ಇಂತಹ ಚಟುವಟಿಕೆಗಳು ವಿಒದ್ಯಾರ್ಥಿಗಳಿಗೆ ತೀವ್ರ ತೊಂದರೆ ನೀಡುವ ಸಾಧ್ಯತೆಗಳಿವೆ. ಕೋವಿಡ್ ಕಾರಣದಿಂದ ಒಟ್ಟು ವ್ಯವಸ್ಥೆಗಳು ಅಲ್ಲೋಲಕಲ್ಲೋಲಗೊಂಡಿದ್ದು, ಸಾಮಾನ್ಯ ಬಡ-ಮಧ್ಯಮ ಕುಟುಂಬಗಳು ದೈನಂದಿನ ಜೀವನಕ್ಕೆ ಪರದಾಡುತ್ತಿರುವಾಗ ಒಂದಷ್ಟು ಜನ ಇಂತಹ ದುವ್ರ್ಯಸನಗಳು ಮತ್ತು ಮಾರಾಟದಲ್ಲಿ ನಿರತವಾಗಿರುವುದು ಕಳವಳಕಾರಿಯಾಗಿದ್ದು, ಆಡಳಿತಾಧಿಕಾರಿಗಳು, ಪೋಲೀಸರು ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.