ಸುಳ್ಯ: ಚಂದನ ಸಾಹಿತ್ಯವೇದಿಕೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕøತಿಕ ಕಲಾ ಸಂಘ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಬುಧವಾರ ಚಂದನ-ಬಂಧನ ಕಾರ್ಯಕ್ರಮ ನಡೆಯಿತು. ಮೂರು ಕೃತಿಗಳ ಲೋಕಾರ್ಪಣೆ, ಹಿರಿಯರ ಸಾಹಿತ್ಯಗೋಷ್ಠಿ, ಸಾಧಕರಿಗೆ ಸನ್ಮಾನ, ಗಾಂಧಿ ನಡಿಗೆ ಮತ್ತು ಪ್ರಮಾಣವಚನ ಸ್ವೀಕಾರ ಎನ್ನುವ ವಿವಿಧ ಹಂತಗಳ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು.
ಇದೇ ವೇದಿಕೆಯಲ್ಲಿ ಯುವ ಕವಯಿತ್ರಿ ಲತಾ ಆಚಾರ್ಯ ಬನಾರಿ ಅವರ ಚೊಚ್ಚಲ ಕೃತಿಯಾದ ‘ಕಾವ್ಯಲತೆ’ ಕವನ ಸಂಕಲನವನ್ನು ಬೆಂಗಳೂರಿನ ಖ್ಯಾತ ಕವಿ ಹರಿನರಸಿಂಹ ಉಪಾಧ್ಯಾಯ ಅವರು ಬಿಡುಗಡೆಗೊಳಿಸಿ ಕೃತಿಪರಿಚಯವನ್ನು ಮಾಡುವುದರ ಮೂಲಕ ಕೃತಿಕರ್ತೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಂದನಸಾಹಿತ್ಯ ವೇದಿಕೆಯ ಅಧ್ಯಕ್ಷ ಭೀಮರಾವ್ ವಾಷ್ಟರ್ ಅವರು ಕು.ಲತಾ ಆಚಾರ್ಯ ಅವರನ್ನು ಗೌರವಿಸಿ ಸನ್ಮಾನಿಸಿದರು.
ಲತಾ ಆಚಾರ್ಯ ಬನಾರಿ ಅವರು ಕೃತಿಕಾರಳಾಗಿ ಮಾತನಾಡಿ, ಕೃತಿಚೌರ್ಯದ ಮಾಡುವವರ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಮತ್ತು ಇದು ಮುಂದುವರಿಯಬಾರದೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಬಿ.ಕೆ.ಮಾಧವ ರಾವ್ ಮಂಗಳೂರು ವಹಿಸಿದ್ದರು. ಎಂ. ವೆಂಕಪ್ಪ ಗೌಡ (ಖ್ಯಾತ ನ್ಯಾಯವಾದಿಗಳು), ನಾರಾಯಣ ರೈ ಕುಕ್ಕುವಳ್ಳಿ, ಪ್ರಭಾಕರ ಶಿಶಿಲ ಸುಳ್ಯ, ಹರಿನರಸಿಂಹ ಉಪಾಧ್ಯಾಯ ಬೆಂಗಳೂರು, ಭೀಮರಾವ್ ವಾಷ್ಠರ್ ಸುಳ್ಯ ಉಪಸ್ಥಿತರಿದ್ದರು.