ವಾಷಿಂಗ್ಟನ್: ಹವಾಮಾನ ವೈಪರೀತ್ಯದಿಂದ ಭಾರತ ದೇಶವು ಬಹಳಷ್ಟು ಬಳಲಿದೆ. ಹವಾಮಾನ ವೈಪರೀತ್ಯಗಳಾದ ಚಂಡಮಾರುತ, ನೆರೆ, ಕ್ಷಾಮದಿಂದಾಗಿ ಈ ವರ್ಷ ಭಾರತಕ್ಕೆ ಅಂದಾಜು 87 ಮಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ವಿಶ್ವ ಸಂಸ್ಥೆಯ ಹವಾಮಾನ ಸಂಸ್ಥೆಯು ಹೇಳಿದೆ.
ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) 2020 ರ ಏಷ್ಯಾದ ಹವಾಮಾನದ ಸ್ಥಿತಿಯ ಬಗ್ಗೆ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ವರದಿಯು "ಹವಾಮಾನ ವೈಪರೀತ್ಯ ಹಾಗೂ ಹವಾಮಾನ ಬದಲಾವಣೆಯು 2020 ರಲ್ಲಿ ಏಷ್ಯಾದಲ್ಲಿ ಭಾರೀ ಅವಘಡಗಳಿಗೆ ಕಾರಣವಾಗಿದೆ. ಹಲವಾರು ಜೀವಗಳನ್ನು ಬಲಿ ಪಡೆದುಕೊಂಡಿದೆ. ಲಕ್ಷಾಂತರ ಮಂದಿಯನ್ನು ನಿರಾಶ್ರಿತರನ್ನಾಗಿಸಿದೆ. ಮಿಲಿಯನ್‌ಗಟ್ಟಲೇ ನಷ್ಟವನ್ನು ಉಂಟು ಮಾಡಿದೆ," ಎಂದು ಉಲ್ಲೇಖ ಮಾಡಿದೆ.
"ಪ್ರಸ್ತುತ ಉಂಟಾಗಿರುವ ಆಹಾರ ಹಾಗೂ ನೀರಿನ ಅಭದ್ರತೆಯು, ಆರೋಗ್ಯದ ಅಪಾಯಗಳು ಹಾಗೂ ಪರಿಸರದ ಅವನತಿಯು ಸುಸ್ಥಿರ ಅಭಿವೃದ್ದಿಗೆ ಬೆದರಿಕೆಯನ್ನು ಒಡ್ಡಿದೆ. ಈ ಹವಾಮಾನ ವೈಪರೀತ್ಯವು ಸುಸ್ಥಿರ ಅಭಿವೃದ್ದಿಗೆ ಬೆದರಿಕೆ ಆಗಿಯೇ ಮುಂದುವರಿದಿದೆ. ಸಾಕಷ್ಟು ನಷ್ಟ ಉಂಟಾಗಿದೆ," ಎಂದು ತಿಳಿಸಿದೆ.
"ಚೀನಾ, ಭಾರತ ಹಾಗೂ ಜಪಾನ್ ಈ ಹವಾಮಾನ ವೈಪರೀತ್ಯದಿಂದಾಗಿ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಚೀನಾದಲ್ಲಿ ಸುಮಾರು 238 ಬಿಲಿಯನ್ ಡಾಲರ್, ಭಾರತದಲ್ಲಿ ಸುಮಾರು 87 ಬಿಲಿಯನ್ ಡಾಲರ್ ಹಾಗೂ ಜಪಾನ್‌ನಲ್ಲಿ 83 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ. 2020 ರಲ್ಲಿ ಉಂಟಾದ ನೆರೆ ಹಾಗೂ ಬಿರುಗಾಳಿ ಸುಮಾರು 50 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಐದು ಸಾವಿರ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ," ಎಂದಿದೆ.
"ಇನ್ನು ಹಾನಿಯ ಬಗ್ಗೆ ಹೇಳುವುದಾದರೆ ಭಾರತ ಹಾಗೂ ಚೀನಾ ಬಹಳಷ್ಟು ಬಳಲಿದೆ. ಭಾರತದಲ್ಲಿ 26.3 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನ ಮೇಲೆ ಹಾನಿ ಉಂಟಾಗಿದೆ. ಚೀನಾದಲ್ಲಿ 23.1 ಬಿಲಿಯನ್ ಡಾಲರ್ ಸಂಪತ್ತಿನ ಮೇಲೆ ಹಾನಿ ಉಂಟಾಗಿದೆ. ಕೆಲವು ದೇಶಗಳಲ್ಲಿ ಇದು ಜಿಡಿಪಿ ಮೇಲೆ ಪರಿಣಾಮ ಬೀರಿದೆ. ಭಾರತ, ಇರಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಗಮನಿಸುವುದಾದರೆ ಇಲ್ಲಿ ಶೇಕಡ 0.5 ರಷ್ಟು ಜಿಡಿಪಿ ಮೇಲೆ ಪರಿಣಾಮ ಬೀರಿದೆ," ಎಂದು ವಿಶ್ವ ಸಂಸ್ಥೆ ವರದಿಯು ಅಭಿಪ್ರಾಯಿಸಿದೆ.
ಆಂಫಾನ್ ಚಂಡಮಾರುತ, ಕೋವಿಡ್ ಏಕ ಬಾರಿಗೆ ಎದುರಿಸಿದ ದೇಶಗಳು
ಮೇ 2020 ರಲ್ಲಿ ಕೊರೊನಾವೈರಸ್ ಸೋಂಕು ಹರಡಿದ ಸಂದರ್ಭದಲ್ಲಿ ಇದುವರೆಗೆ ದಾಖಲಾದ ಪ್ರಬಲ ಚಂಡಮಾರುತಗಳಲ್ಲಿ ಒಂದಾದ ಆಂಫಾನ್ ಚಂಡಮಾರುತವು ಬಾಂಗ್ಲಾದೇಶ ಮತ್ತು ಭಾರತದಲ್ಲಿ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಿದೆ ಎಂಬುವುದನ್ನು ಈ ವರದಿಯು ಉಲ್ಲೇಖ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ 13.6 ಮಿಲಿಯನ್ ಜನರಿಗೆ ಈ ಚಂಡಮಾರುತದ ಹಾನಿ ಉಂಟಾಗಿದೆ. 14 ಬಿಲಿಯನ್ ಡಾಲರ್ ನಷ್ಟ ಈ ಚಂಡಮಾರುತದಿಂದಾಗಿ ಉಂಟಾಗಿದೆ. ಆಂಫಾನ್ ಚಂಡಮಾರುತದಿಂದಾಗಿ ಭಾರತದಲ್ಲಿ 2.4 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಜನರು ಸ್ಥಳಾಂತರಗೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ 2.5 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.
2.8 ಮನೆಗಳಿಗೆ ಹಾನಿ ಉಂಟಾಗಿದ್ದು, ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರಿಗೆ ನಿರಾಶ್ರಿತ ಕೇಂದ್ರದಲ್ಲೂ ಆಶ್ರಯ ಲಭಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಾಗಿ ಹಲವಾರು ಮಂದಿ ಟೆಂಟುಗಳನ್ನು ಹಾಕಿಕೊಂಡು ಉಳಿಯಬೇಕಾಗಿ ಬಂದಿದೆ. ಕೊರೊನಾ ವೈರಸ್ ಸೋಂಕಿನ ನಡುವೆ ಈ ಚಂಡಮಾರುತ, ನೆರೆಯನ್ನು ಒಟ್ಟಾಗಿ ಎದುರಿಸಬೇಕಾದ ಸ್ಥಿತಿ ಈ ದೇಶಗಳಿಗೆ ಬಂದಿತ್ತು. ಈ ನೆರೆಯ ಕಾರಣದಿಂದಾಗಿ ಕೊರೊನಾ ವೈರಸ್ ಸೋಂಕಿನ ನಿರ್ಬಂಧಗಳನ್ನು ಪಾಲನೆ ಮಾಡುವುದು ಈ ದೇಶಗಳಿಗೆ ಕಷ್ಟವಾಗಿದೆ," ಎಂದು ಕೂಡಾ ವರದಿಯಲ್ಲಿ ಉಲ್ಲೇಖ ಮಾಡಿದೆ.