ನವದೆಹಲಿ:ಕೋವಿಡ್-19 ಸೋಂಕಿನ ವಿರುದ್ಧ ಕನಿಷ್ಠ ಒಂದು ಡೋಸ್ ಕೂಡಾ ಪಡೆಯದ ದಿಲ್ಲಿ ಸರ್ಕಾರದ ಉದ್ಯೋಗದಲ್ಲಿರುವ ಎರಡು ಲಕ್ಷ ನೌಕರರನ್ನು ಉದ್ಯೋಗಕ್ಕೆ ನಿಷೇಧಿಸಿದ ಹತ್ತು ದಿನಗಳ ಬಳಿಕ ಮತ್ತೊಂದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿರುವುದಾಗಿ ವಿವಿಧ ಇಲಾಖೆಗಳು ಪ್ರಕಟಿಸಿವೆ. ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ದಿಲ್ಲಿ ವಿಕೋಪ ನಿರ್ವಹಣೆ ಪ್ರಾಧಿಕಾರ (ಡಿಡಿಎಂಎ) ನೀಡಿದ ಆದೇಶಕ್ಕೆ ಬದ್ಧವಾಗದಿದ್ದರೆ ಒಂದು ವರ್ಷ ವರೆಗೆ ಜೈಲು ಶಿಕ್ಷೆ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಒಂದು ಇಲಾಖೆ ಸ್ಪಷ್ಟಪಡಿಸಿದೆ.
ಡಿಡಿಎಂಎ ಅಕ್ಟೋಬರ್ 8ರಂದು ಆದೇಶ ಹೊರಡಿಸಿ, ದಿಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಸ್ಥಳೀಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಅಕ್ಟೋಬರ್ 15ರ ಒಳಗಾಗಿ ಕಡ್ಡಾಯವಾಗಿ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸೂಚಿಸಿತ್ತು.
ಲಸಿಕೆ ಹಾಕಿಸಿಕೊಳ್ಳದ ಸಿಬ್ಬಂದಿಗೆ ಅಕ್ಟೋಬರ್ 16ರಿಂದ ಕೆಲಸ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಮೊದಲನೇ ಡೋಸ್ ಪಡೆಯುವವರೆಗಿನ ಅವಧಿಯನ್ನು ಗೈರುಹಾಜರು ಅಥವಾ ರಜೆ ಎಂದು ಪರಿಗಣಿಸಲು ನಿರ್ಧರಿಸಲಾಗಿತ್ತು. ಎಲ್ಲ ಸರ್ಕಾರಿ ನೌಕರರು, ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಇತ್ಯಾದಿ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಮಾಡುವ ಉದ್ದೇಶದಿಂದ ಸೆಪ್ಟಂಬರ್ 29ರಂದು ನಡೆದ ಡಿಡಿಎಂಎ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಇಲ್ಲವೇ ಎನ್ನುವುದನ್ನು ಆರೋಗ್ಯ ಸೇತು ಆಯಪ್ ಮೂಲಕ ಆಯಾ ಇಲಾಖೆಯ ಮುಖ್ಯಸ್ಥರು ದೃಢೀಕರಿಸಬೇಕಿತ್ತು.
ಮಂಗಳವಾರ ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಆದೇಶದಲ್ಲಿ ಡಿಡಿಎಂಎ ಆದೇಶಕ್ಕೆ ಬದ್ಧವಾಗದಿದ್ದಲ್ಲಿ, ವಿಕೋಪ ನಿರ್ವಹಣೆ ಕಾಯ್ದೆ-2005ರ ಸೆಕ್ಷನ್ 51ರಿಂದ 60ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಕಾಯ್ದೆಯ ಸೆಕ್ಷನ್ 51(ಬಿ) ಅಡಿಯಲ್ಲಿ ಆದೇಶಕ್ಕೆ ಬದ್ಧವಾಗದಿದ್ದಲ್ಲಿ ಒಂದು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.