ಪ್ರತಿಯೊಬ್ಬರೂ ಮುಖದ ಸೌಂದರ್ಯಕ್ಕಾಗಿ ನಾನಾ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಆ ಉತ್ಪನ್ನಗಳು ಅವರ ತ್ವಚೆಗೆ ಸರಿಯಾಗಿದ್ದರೆ, ಫಲಿತಾಂಶ ಸರಿಯಾಗಿರುತ್ತದೆ. ಒಂದುವೇಳೆ ವಿಭಿನ್ನವಾಗಿದ್ದರೆ, ಅಡ್ಡಪರಿಣಾಮಗಳು ಉಂಟಾಗಬಹುದು. ಆದ್ದರಿಂದ ವಿವಿಧ ಉತ್ಪನ್ನ ಖರೀದಿಸುವ ಮೊದಲು ನಿಮ್ಮ ತ್ವಚೆಯ ಪ್ರಕಾರ ಯಾವುದು ಎಂಬುದು ಅರಿತುಕೊಳ್ಳುವುದು ಮುಖ್ಯ. ತದನಂತರ ಆ ತ್ವಚೆಯ ಪ್ರಕಾರಕ್ಕೆ ಅನುಗುಣವಾದ ಆರೈಕೆಗಳನ್ನು ಮಾಡಿಕೊಳ್ಳಬಹುದು.
ಹೆಚ್ಚಿನವರಿಗೆ ತಮ್ಮ ತ್ವಚೆಯ ಪ್ರಕಾರ ಯಾವುದು ಎಂಬುದು ತಿಳಿದಿಲ್ಲ, ಇದನ್ನು ತಿಳಿಯಲು ನಾವಿಂದು ನಿಮಗೆ ಸಹಾಯ ಮಾಡಲಿದ್ದೇವೆ. ಈ ಕೆಳಗೆ ನೀಡಿರುವ ವಿಧಾನಗಳಿಂದ ನಿಮ್ಮ ತ್ವಚೆ ಯಾವ ಪ್ರಕಾರಕ್ಕೆ ಸೇರಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಚರ್ಮದ ವಿವಿಧ ವಿಧಗಳು: ಶುಷ್ಕ ಅಥವಾ ಒಣ ತ್ವಚೆ(ಡ್ರೈ ಸ್ಕಿನ್): ಶುಷ್ಕ ಚರ್ಮವು ಮುಖ್ಯವಾಗಿ ಹೆಸರೇ ಸೂಚಿಸುವಂತೆ ಶುಷ್ಕ ಅಥವಾ ಒಣಗಿರುತ್ತದೆ. ಇದು ಡಲ್ ಆಗಿ ಕಾಣುತ್ತಿದ್ದು, ಒರಟು, ಚಕ್ಕೆಯಂತಿರಬಹುದು. ನಿಮ್ಮ ಉಗುರಿನಿಂದ ಗೆರೆ ಎಳೆದಾಗ, ಬಿಳಿ ಬಣ್ಣದ ಗೆರೆ ಮೂಡಿದರೆ, ಅವರು ಒಣ ಅಥವಾ ಶುಷ್ಕ ತ್ವಚೆಯನ್ನು ಹೊಂದಿದ್ದಾರೆ ಎಂದರ್ಥ. ಒಣ ಚರ್ಮವು ಸಾಮಾನ್ಯವಾಗಿ ಬಿಗಿಯಾದ ಅಥವಾ ಕಡಿಮೆ ಸ್ಥಿತಿಸ್ಥಾಪಕತ್ವವನ್ನು ಹೊಂದಿರುತ್ತದೆ. ಕೆಲವೊಮ್ಮೆ ತುರಿಕೆ ಅಥವಾ ಕಿರಿಕಿರಿಯುಂಟಾಗಬಹುದು.
ಎಣ್ಣೆಯುಕ್ತ ತ್ವಚೆ( ಆಯಿಲಿ ಸ್ಕಿನ್): ಎಣ್ಣೆಯುಕ್ತ ಚರ್ಮವು ಮೇದೋಗ್ರಂಥಿ ಎಂಬ ರಾಸಾಯನಿಕವನ್ನು ಉತ್ಪತ್ತಿ ಮಾಡುತ್ತದೆ. ಇದು ಮುಖದಲ್ಲಿ ಜಿಡ್ಡನಿಂತೆ ಕಾಣುತ್ತದೆ. ಅದರಲ್ಲೂ ಮುಖ್ಯವಾಗಿ ಟಿ-ಜೋನ್ ಅಂದರೆ ಹಣೆ, ಮೂಗು ಮತ್ತು ಗಲ್ಲದಲ್ಲಿ ಜಿಡ್ಡಿನಾಂಶ ಹೆಚ್ಚಾಗಿ ಕಂಡುಬರುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ದೊಡ್ಡ ಚರ್ಮ ರಂಧ್ರಗಳನ್ನು ಹೊಂದಿದ್ದು, ಮೊಡವೆಗಳ ಬೆಳವಣಿಗೆಗೆ ಹೆಚ್ಚು ಒಳಗಾಗುತ್ತಾರೆ.
ಸಂಯೋಜಿತ ತ್ವಚೆ(ಕಾಂಬಿನೇಷನ್ ಸ್ಕಿನ್): ಹೆಸರೇ ಸೂಚಿಸುವಂತೆ ಸಂಯೋಜಿತ ತ್ವಚೆಯು ಎಣ್ಣೆಯುಕ್ತ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಅಂದರೆ ಕೆಲವು ಪ್ರದೇಶಗಳಲ್ಲಿ ಜಿಡ್ಡುಜಿಡ್ಡಾಗಿದ್ದು,ಇನ್ನೂ ಕೆಲವು ಭಾಗ ಒಣಗಿರುತ್ತದೆ. ಕಾಂಬಿನೇಷನ್ ಸ್ಕಿನ್ ಹೊಂದಿರುವ ಜನರಲ್ಲಿ ಜಿಡ್ಡುತನ ಮುಖ್ಯವಾಗಿ ಹಣೆ, ಮೂಗಿನಲ್ಲಿ ಕಂಡುಬಂದರೆ, ಕೆನ್ನೆಗಳು ಸಾಮಾನ್ಯ ಅಥವಾ ಒಣಗಿರುತ್ತದೆ.
ಸಾಮಾನ್ಯ ತ್ವಚೆ(ನಾರ್ಮಲ್ ಸ್ಕಿನ್): ಇದು ಮೂಲಭೂತವಾಗಿ ಸಮತೋಲಿತವಾಗಿರುತ್ತದೆ. ಒಣ ಅಥವಾ ಎಣ್ಣೆಯುಕ್ತವಾಗಿರುವುದಿಲ್ಲ. ಈ ರೀತಿಯ ತ್ವಚೆ ಹೊಂದಿರುವವರಿಗೆ ತಕ್ಷಣ ಮೊಡವೆಗಳಾಗಲಿ, ಸುಡುವಿಕೆ ಅಥವಾ ಜಿಡ್ಡುತನವಾಗಲೀ ಕಂಡುಬರುವುದಿಲ್ಲ. ಈ ರೀತಿಯ ಚರ್ಮದ ರಂಧ್ರಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ ಮತ್ತು ವಿನ್ಯಾಸವು ಮೃದುವಾಗಿರುತ್ತದೆ. ಅವರು ಯಾವುದೇ ಸೂಕ್ಷ್ಮತೆ ಅಥವಾ ಕಲೆಗಳಿಗೆ ಒಳಗಾಗುವ ಸಾಧ್ಯತೆ ಕಡಿಮೆ.
ನಿಮ್ಮ ತ್ವಚೆ ಪ್ರಕಾರವನ್ನು ಮನೆಯಲ್ಲಿಯೇ ಸುಲಭವಾಗಿ ಕಂಡುಹಿಡಿಯುವ ವಿಧಾನಗಳು ಹೀಗಿವೆ: ಬರೀ ಮುಖ ವಿಧಾನ: ನಿಮ್ಮ ತ್ವಚೆ ಯಾವ ಬಗೆಯದು ಎಂದು ತಿಳಿಯಲು ಮೊದಲು ನಿಮ್ಮ ಮುಖವನ್ನು ಕ್ಲೆನ್ಸರ್‌ನಿಂದ ಸರಿಯಾಗಿ ತೊಳೆಯಬೇಕು. ತದನಂತರ ಮುಖಕ್ಕೆ ಯಾವುದೇ ಕ್ರೀಮ್, ಪೌಡರ್ ಹಚ್ಚಬೇಡಿ. ಹಾಗೇ ಒಂದು ಗಂಟೆ ಬಿಡಿ, ನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ, ನಿಮ್ಮ ತ್ವಚೆ ತೊಳೆದಾಗ ಕಂಡಷ್ಟೇ ಆಕರ್ಷಕವಾಗಿ ಕಂಡರೆ ನಾರ್ಮಲ್ ಅಂದರೆ ಸಾಮಾನ್ಯ ತ್ವಚೆ ಎಂದರ್ಥ, ಮುಖವಿಡೀ ಎಣ್ಣೆ-ಎಣ್ಣೆಯಾಗಿದ್ದರೆ ಎಣ್ಣೆ ತ್ವಚೆ, ಕೇವಲ ಹಣೆ, ಮೂಗಿನಲ್ಲಿ ಜಿಡ್ಡುತನವಿದ್ದು, ಕೆನ್ನೆ ಒಣಗಿದ್ದರೆ ಅದು ಕಾಂಬಿನೇಷನ್ ಸ್ಕಿನ್, ತ್ವಚೆ ತುಂಬಾ ಮಂಕಾಗಿ, ಶುಷ್ಕವಾಗಿ ಕಂಡರೆ ನಿಮ್ಮದು ಒಣ ತ್ವಚೆ ಎಂದು ಅರ್ಥ ಮಾಡಿಕೊಳ್ಳಿ.
ಬ್ಲಾಟಿಂಗ್ ಶೀಟ್ ವಿಧಾನ: ಮೇಲಿನ ವಿಧಾನಕ್ಕಿಂತ ಭಿನ್ನವಾಗಿ ಇದು ವೇಗವಾಗಿರುತ್ತದೆ. ನಿಮಗೆ ಬೇಕಾಗಿರುವುದು ಒಂದು ಬ್ಲಾಟಿಂಗ್ ಪೇಪರ್. ಅದನ್ನು ನಿಮ್ಮ ಮುಖದ ವಿವಿಧ ಪ್ರದೇಶಗಳಲ್ಲಿ ಪ್ಯಾಟ್ ಮಾಡಿ. ಹಾಳೆಯಲ್ಲಿ ಎಷ್ಟು ಎಣ್ಣೆ ಇದೆ ಎಂದು ತಿಳಿಯಲು ಹಾಳೆಯನ್ನು ಬೆಳಕಿಗೆ ಹಿಡಿಯಿರಿ. ಹಾಳೆಯಲ್ಲಿ ಎಣ್ಣೆಯಿಲ್ಲದಿದ್ದರೆ ಒಣ ತ್ವಚೆಯನ್ನು ಹೊಂದಿದ್ದೀರಿ, ಬ್ಲಾಟಿಂಗ್ ಶೀಟ್ ಮುಖ್ಯವಾಗಿ ಹಣೆಯ ಮತ್ತು ಮೂಗಿನ ಪ್ರದೇಶದಲ್ಲಿ ಎಣ್ಣೆಯನ್ನು ತೋರಿಸಿದರೆ ಕಾಂಬಿನೇಷನ್ ಸ್ಕಿನ್, ಬ್ಲಾಟಿಂಗ್ ಪೇಪರ್ ತುಂಬಾ ಎಣ್ಣೆಯ ಅಂಶವಿದ್ದರೆ ಎಣ್ಣೆಯುಕ್ತ ತ್ವಚೆ, ಕೊನೆಯದಾಗಿ ನಿಮ್ಮ ಬ್ಲಾಟಿಂಗ್ ಪೇಪರ್ ಸಮತೋಲಿತವಾಗಿದ್ದರೆ ನಿಮ್ಮದು ನಾರ್ಮಲ್ ಸ್ಕಿನ್ ಎಂದು ತಿಳಿಯಿರಿ.