ನವದೆಹಲಿ :ʼಮಾರ್ಕ್ಸ್ (ಅಂಕಗಳ) ಜಿಹಾದ್' ಎಂಬರ್ಥದ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ದಿಲ್ಲಿ ವಿವಿ ಸಂಯೋಜಿತ ಕಿರೋರಿ ಮಾಲ್ ಕಾಲೇಜಿನ ಭೌತಶಾಸ್ತ್ರದ ಪ್ರೊಫೆಸರ್ ರಾಕೇಶ್ ಕುಮಾರ್ ಪಾಂಡೆ ಎಂಬವರು ವಿವಾದಕ್ಕೀಡಾಗಿದ್ದಾರೆ.
"ಒಂದು ಕೋರ್ಸ್‍ಗೆ ಕೇವಲ 20 ಸೀಟುಗಳಿದ್ದರೂ ಕಾಲೇಜೊಂದು 26 ವಿದ್ಯಾರ್ಥಿಗಳ ದಾಖಲಾತಿ ಮಾಡಬೇಕಾಯಿತು, ಏಕೆಂದರೆ ಕೇರಳ ಮಂಡಳಿ ಅವರೆಲ್ಲರಿಗೂ 100 ಶೇಕಡಾ ಅಂಕಗಳನ್ನು ನೀಡಿದೆ. ಕೇರಳ ಬೋರ್ಡ್ #ಮಾರ್ಕ್ಸ್ ಜಿಹಾದ್ ಜಾರಿಗೊಳಿಸುತ್ತದೆ" ಎಂದು ಪಾಂಡೆ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದರು.
"ದಿಲ್ಲಿ ವಿವಿಗೆ ದಕ್ಷಿಣದ ರಾಜ್ಯಗಳಿಂದ ವಿವರಿಸಲಾಗದಷ್ಟು ವಿದ್ಯಾರ್ಥಿಗಳು ಬರುತ್ತಿರುವುದು ಸಹಜ, ಯಾವುದೇ ಉದ್ದೇಶವಿಲ್ಲದ ಹಾಗೂ ನೈಜ ಬೆಳವಣಿಗೆ ಎಂದು ತಿಳಿಯಲು ಸಾಧ್ಯವಿಲ್ಲ" ಎಂದು ಆರೆಸ್ಸೆಸ್ ಸಂಯೋಜಿತ ನ್ಯಾಷನಲ್ ಡೆಮಾಕ್ರೆಟಿಕ್ ಟೀಚರ್ಸ್ ಫ್ರಂಟ್‍ನ ಮಾಜಿ ಅಧ್ಯಕ್ಷರಾಗಿರುವ ಪಾಂಡೆ ಹೇಳುತ್ತಾರೆ.
ಜವಾಹರಲಾಲ್ ನೆಹರೂ ವಿವಿಯಂತಹ ಸಂಸ್ಥೆಗಳ ಮೇಲೆ ಎಡಪಂಥೀಯರ ಹಿಡಿತ ಕಡಿಮೆಯಾಗುತ್ತಿರುವುದರಿಂದ ಅವರೀಗ ದಿಲ್ಲಿ ವಿವಿಗೆ ಹರಡಲು ಬಯಸಿರಬಹುದು ಎಂದು ಹೇಳಿದ ಅವರು ಮೆರಿಟ್ ಆಧರಿತ ಪ್ರವೇಶಾತಿಗಳಿಗೆ ಇರುವ ಮಾನದಂಡವನ್ನು ದುರುಪಯೋಗ ಪಡಿಸುವುದನ್ನು ನಿಲ್ಲಿಸಲು ದಿಲ್ಲಿ ವಿವಿ ಪ್ರವೇಶ ಪರೀಕ್ಷೆ ನಡೆಸಬೇಕೆಂದೂ ಅವರು ಹೇಳಿದರು.
"ಪ್ರೀತಿಯ ಉದ್ದೇಶವಿಲ್ಲದೆ ಮಾಡುವ ಪ್ರೀತಿ `ಲವ್ ಜಿಹಾದ್' ಹಾಗೂ ಶೈಕ್ಷಣಿಕವಲ್ಲದ ಬೇರೆ ಉದ್ದೇಶಗಳಿಗೆ ನೀಡಿದ ಅಂಕಗಳು ʼಮಾರ್ಕ್ಸ್ ಜಿಹಾದ್ʼ ಎಂದು ಈ ಪ್ರೊಫೆಸರ್ ಹೇಳಿದ್ದಾರೆ.
ಪ್ರೊಫೆಸರ್ ಪಾಂಡೆ ಹೇಳಿಕೆ ಹಲವು ಶಿಕ್ಷಕರ ಮತ್ತು ಸಾಮಾಜಿಕ ತಾಣ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ.