ಚಂಡೀಗಡ: ಡೇರಾ ಸಚ್ಚಾ ಸೌದಾ ವ್ಯವಸ್ಥಾಪಕ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಸಂಘಟನೆ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಹಾಗೂ ಇತರ ನಾಲ್ವರಿಗೆ ಇಲ್ಲಿನ ವಿಶೇಷ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೃಷ್ಣ ಲಾಲ್, ಜಸ್ಬೀರ್‌ಸಿಂಗ್, ಅವತಾರ್ ಸಿಂಗ್ ಹಾಗೂ ಸಬ್ದಿಲ್ ಶಿಕ್ಷೆಗೆ ಒಳಗಾದ ಇತರ ಅಪರಾಧಿಗಳು.
ರಂಜಿತ್ ಸಿಂಗ್ ಸಹ ಡೇರಾ ಸಚ್ಚಾದ ಅನುಯಾಯಿ ಆಗಿದ್ದರು. ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಖಾನಪುರ- ಕೊಲಿಯಾನ್ ಗ್ರಾಮದಲ್ಲಿ 2002ರ ಜುಲೈ 10ರಂದು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಸಂಘಟನೆಯ ಕೇಂದ್ರ ಸ್ಥಾನದಲ್ಲಿರುವ ಮಹಿಳೆಯರನ್ನು ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಯಾವ ಶೋಷಣೆ ಮಾಡುತ್ತಿದ್ದ ಎಂಬ ವಿವರಗಳನ್ನು ಹೊಂದಿದ ಪತ್ರವೊಂದು ಆಗ ಹರಿದಾಡಿತ್ತು. ಈ ಕೃತ್ಯದಲ್ಲಿ ರಂಜಿತ್‌ಸಿಂಗ್ ಪಾತ್ರ ಇತ್ತು ಹಾಗೂ ತನ್ನ ಕೊಲೆ ಮಾಡಲು ಆತ ಸಂಚು ರೂಪಿಸಿದ್ದ ಎಂದು ಗುರ್ಮಿತ್ ಸಿಂಗ್ ಶಂಕಿಸಿದ್ದ. ಈ ಕಾರಣಕ್ಕೆ ರಂಜಿತ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹೀಮ್ ಸಿಂಗ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ 2017ರಲ್ಲಿ ತೀರ್ಪು ನೀಡಿದೆ. ಆತನನ್ನು ಸದ್ಯ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿರಿಸಲಾಗಿದೆ.