ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೇಫ್ ಲಾಕರ್ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸೇಫ್ ಲಾಕರ್ ಕುರಿತಂತೆ ಗ್ರಾಹಕರ ದೂರು, ಬ್ಯಾಂಕ್ಗಳು ಮತ್ತು ಭಾರತೀಯ ಬ್ಯಾಂಕ್ಗಳ ಅಸೋಸಿಯೇಷನ್ (ಐಬಿಎ)ಗಳಿಂದ ಬಂದ ಪ್ರತಿಕ್ರಿಯೆ, ಬ್ಯಾಂಕಿಂಗ್ ಪ್ರಕ್ರಿಯೆ ಹಾಗೂ ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆ ಹಿನ್ನೆಲೆಯಲ್ಲಿ ಹೊಸ ನಿಯಮವನ್ನು ಆರ್ಬಿಐ ಪರಿಷ್ಕರಿಸಿದೆ.
ಬದಲಾವಣೆ ಏನು?
- ಲಾಕರ್ಗಳನ್ನು ಹಂಚಿಕೆ ಮಾಡುವ ಸಮಯದಲ್ಲೇ ಅದಕ್ಕೆ ವಿಧಿಸುವ ಶುಲ್ಕವನ್ನು ಠೇವಣಿ ರೂಪದಲ್ಲಿ (ಅಡ್ವಾನ್ಸ್) ಸಂಗ್ರಹಿಸಬಹುದು. ಇದು ಮೂರು ವರ್ಷದ ಲಾಕರ್ ಬಾಡಿಗೆ ಮತ್ತು ನಿರ್ವಹಣಾ ಶುಲ್ಕವಾಗಿರುತ್ತದೆ. ಆದರೆ, ಈ ನಿಯಮವನ್ನು ಈಗಾಗಲೇ ಲಾಕರ್ ಹೊಂದಿರುವ ಮತ್ತು ಸಕ್ರಿಯವಾಗಿ ಖಾತೆ ನಿರ್ವಹಣೆ ಮಾಡುತ್ತಿರುವವರಿಂದ ಪಡೆಯುವಂತಿಲ್ಲ. ಸಕಾಲದಲ್ಲಿ ಲಾಕರ್ ಶುಲ್ಕ ಪಾವತಿ ಆಗದಿರುವ ಹಿನ್ನೆಲೆಯಲ್ಲಿ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
- ಲಾಕರ್ಗಳಿಗೆ ಮುಂಗಡವಾಗಿ ಪಡೆದಂತಹ ಶುಲ್ಕವನ್ನು ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ಗ್ರಾಹಕರಿಗೆ ಹಿಂದುರುಗಿಸಬೇಕು.
- ಲಾಕರ್ಗಳಿಗೆ ಬ್ಯಾಂಕ್ ಕಡೆಯಿಂದ ಉಂಟಾಗುವಂತಹ ಹಾನಿ, ನಷ್ಟದ ಸಂದರ್ಭದಲ್ಲಿ ಸಂಪೂರ್ಣ ಹೊಣೆ ಹೊರುವ ಅನುಮೋದಿತ ನೀತಿಗೆ ಬದ್ಧವಾಗಿರಬೇಕು.
- ಲಾಕರ್ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವ ಹಿಸುವುದನ್ನು ಬ್ಯಾಂಕ್ಗಳು ಖಾತ್ರಿ ಪಡಿಸಬೇಕು. ಲಾಕರ್ ರೂಂಗಳಿಗೆ ಅನಧಿಕೃತ ಪ್ರವೇಶ ಇಲ್ಲದಂತೆ ಸುರಕ್ಷತೆ ನೀಡಬೇಕು. ದರೋಡೆ, ಕಳ್ಳತನ ಆಗದಂತೆ ಖಾತ್ರಿ ಒದಗಿಸುವುದೂ ಬ್ಯಾಂಕ್ಗಳ ಜವಾಬ್ದಾರಿ.
- ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ (ಭೂಕಂಪನ, ಪ್ರವಾಹ ಇತ್ಯಾದಿ) ಲಾಕರ್ಗಳಿಗೆ ಆಗುವ ಹಾನಿಗೆ ಬ್ಯಾಂಕ್ಗಳು ಬಾಧ್ಯವಲ್ಲ. ಆದರೆ, ಇಂಥ ವಿಪತ್ತುಗಳಿಂದ ಸಂಪೂರ್ಣ ರಕ್ಷಣೆ ಪಡೆಯುವಂತಹ ಸೂಕ್ತ ಕ್ರಮಗಳನ್ನು ಬ್ಯಾಂಕ್ಗಳು ಅಳವಡಿಸಿಕೊಂಡಿರುವುದು ಅವಶ್ಯಕ.
- ಗುಣಮಟ್ಟದ ದೋಷ ಅಥವಾ ಬ್ಯಾಂಕ್ ಸಿಬ್ಬಂದಿಯ ಅಚಾತುರ್ಯದಿಂದ ಆಗುವ ಬೆಂಕಿ ಅವಘಡ ಅಥವಾ ಕಟ್ಟಡ ಕುಸಿತದಿಂದಾಗುವ ಹಾನಿಗೆ ಲಾಕರ್ಗಳಿಗೆ ವಿಧಿಸುವ ವಾರ್ಷಿಕ ಶುಲ್ಕದ ನೂರು ಪಟ್ಟು ಪರಿಹಾರವನ್ನು ಬ್ಯಾಂಕ್ಗಳು ಕಟ್ಟಿಕೊಡಬೇಕು.
- ಅಪಾಯಕಾರಿ ವಸ್ತುಗಳನ್ನು ಲಾಕರ್ನಲ್ಲಿ ಇಡುವಂತಿಲ್ಲ ಎಂಬ ನಿಬಂಧನೆಗೆ ಗ್ರಾಹಕರು ಬದ್ಧರಾಗಿರುವಂತಹ ಒಪ್ಪಂದವನ್ನು ಬ್ಯಾಂಕ್ಗಳು ಮಾಡಿಕೊಳ್ಳಬೇಕು.