ಕಾಸರಗೋಡು: ಕಾಸರಗೋಡು - ಮಂಗಳೂರು ರೂಟ್‍ನಲ್ಲಿ ಪ್ರಯಾಣಿಕರಿಗೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಕಾರಿಗಳೊಂದಿಗೆ ಮಾತುಕತೆ ನಡೆಸಲು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಮನವಿ ಮಾಡಿದ್ದಾರೆ.
ಕಳೆದ ಅನೇಕ ತಿಂಗಳುಗಳಿಂದ ಕೋವಿಡ್‍ನ ಹೆಸರಿನಲ್ಲಿ ಕಾಸರಗೋಡು - ಮಂಗಳೂರು ಮಧ್ಯೆ ದಿನನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕಡ್ಡಾಯಗೊಳಿಸಿದ್ದ ಆರ್‍ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ತಪಾಸಣೆಯನ್ನು ಕೊನೆಗೊಳಿಸಿ ಪ್ರಯಾಣ ಸುಗಮಗೊಳಿಸುವಂತೆ ರವೀಶ ತಂತ್ರಿ ಕುಂಟಾರು ಒತ್ತಾಯಿಸಿದ್ದಾರೆ.
ಈ ಸಂಬಂಧ ಅಧಿಕಾರಿ ಮಟ್ಟದಲ್ಲಿ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಾಸರಗೋಡು ಜಿಲ್ಲಾಕಾರಿ ಭಂಡಾರಿ ಸ್ವಾಗತ್ ರಣ್‍ವೀರ್ ಚಂದ್ ಅವರಿಗೆ ಮನವಿ ಸಲ್ಲಿಸಿ ದಕ್ಷಿಣ ಕನ್ನಡ ಜಿಲ್ಲಾಕಾರಿಗಳೊಂದಿಗೆ ಮಾತುಕತೆ ನಡೆಸುವಂತೆ ವಿನಂತಿಸಿದ್ದಾರೆ.
ಕೇರಳದಲ್ಲಿ ಈಗಾಗಲೇ ಶೇಕಡಾ 92 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಅಲ್ಲದೆ ಕಾಸರಗೋಡು ಜಿಲ್ಲೆಯಲ್ಲಿ ಪಾಸಿಟಿವ್ ದರವು ಕೂಡ ಬಹಳಷ್ಟು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜು, ಉದ್ಯೋಗ, ವ್ಯಾಪಾರ, ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗಿ ಬರುವ ಸಾರ್ವಜನಿಕರಿಗೆ ಪ್ರಯಾಣವನ್ನು ಸುಗಮಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕಾಸರಗೋಡು - ಮಂಗಳೂರು ಬಸ್ ಸಂಚಾರವನ್ನು ಪುನರಾರಂಭಿಸಿ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡ ಬೇಕಾಗಿ ರವೀಶ ತಂತ್ರಿಯವರು ಕರ್ನಾಟಕ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲಾಕಾರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡ ಭೇಟಿಯಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ನಿಯೋಗವು ಮಾತುಕತೆ ನಡೆಸಲಿದೆ ಎಂಬುವುದಾಗಿ ಪಕ್ಷದ ಜಿಲ್ಲಾಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ್ದಾರೆ.