ನವದೆಹಲಿ: ಕೇಂದ್ರ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಂತರ ಒಂದು ಡೋಸ್ ಕೋವಿಡ್-19 ಲಸಿಕೆಯನ್ನು 265 ರೂ.ಗೆ ಇಳಿಕೆ ಮಾಡಲು ಝೈಡಸ್ ಕ್ಯಾಡಿಲಾ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ನಿರ್ಧಾರ ಹೊರಬೀಳಲು ಇನ್ನೂ ಸ್ವಲ್ಪ ದಿನವಾಗಲಿದೆ ಎಂದು ಮೂಲಗಳು ಭಾನುವಾರ ಹೇಳಿವೆ.
ಸೂಜಿ ರಹಿತ ಝೈಡಸ್ ಕ್ಯಾಡಿಲಾ ಲಸಿಕೆ ಹಾಕಲು, ಪ್ರತಿ ಡೋಸ್ ಗೆ ವಿಲೇವಾರಿ ಮಾಡುವಂತಹ ನೋವು ರಹಿತ 93 ರೂ. ವೆಚ್ಚದ ಜೆಟ್ ಅಪ್ಲಿಕೆಟರ್ ಅಗತ್ಯವಿದೆ. ಇದರಿಂದಾಗಿ ಪ್ರತಿ ಡೋಸ್ ಲಸಿಕೆಯ ದರ ರೂ. 358 ಆಗಲಿದೆ.
ಮೂರು ಡೋಸ್ ಲಸಿಕೆಗಾಗಿ ಈ ಹಿಂದೆ 1,900 ರೂ. ದರವನ್ನು ಅಹಮದಾಬಾದ್ ಮೂಲಕ ಔಷಧ ಕಂಪನಿ ಪ್ರಸ್ತಾಪಿಸಿದ್ದಾಗಿ ಮೂಲವೊಂದು ಹೇಳಿದೆ. ಸರ್ಕಾರದೊಂದಿಗೆ ನಿರಂತರ ಮಾತುಕತೆ ನಂತರ ಬಿಸಾಡಬಲ್ಲ ಜೆಟ್ ಅಪ್ಲಿಕೆಟರ್ ನ 93 ರೂ. ವೆಚ್ಚ ಸೇರಿದಂತೆ ಪ್ರತಿ ಡೋಸ್ ಲಸಿಕೆ ಬೆಲೆಯನ್ನು ರೂ. 358ಕ್ಕೆ ಕಂಪನಿ ಕಡಿಮೆ ಮಾಡಿದೆ. ಈ ವಾರದೊಳಗೆ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿರುವುದಾಗಿ ನಂಬಲಾರ್ಹ ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ಹೇಳಿದೆ.
12 ವರ್ಷದವರು ಹಾಗೂ ಅದಕ್ಕೂ ಮೇಲ್ಪಟ್ಟ ಮಕ್ಕಳಿಗೆ ನೀಡಬಹುದಾದ ಸ್ವದೇಶಿ ನಿರ್ಮಿತ ವಿಶ್ವದ ಮೊದಲ ಡಿಎನ್ ಎ ಮೂಲದ ಸೂಜಿ ರಹಿತ ಕೋವಿಡ್-19 ಲಸಿಕೆ ZyCoV-D ತುರ್ತು ಬಳಕೆಗೆ ಆಗಸ್ಟ್ 30 ರಂದು ಭಾರತೀಯ ಔಷಧ ನಿಯಂತ್ರಣ ಮಂಡಳಿ ಅನುಮೋದನೆ ನೀಡಿತ್ತು.