ವಾಷಿಂಗ್ ಟನ್: ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರ ಹುದ್ದೆಯಿಂದ ಗೀತಾಗೋಪಿನಾಥ್ ನಿರ್ಗಮಿಸಲಿದ್ದು ತಮ್ಮ ಮೂಲ ವೃತ್ತಿಗೆ ಮರಳಲಿದ್ದಾರೆ.
ಐಎಂಎಫ್ ಈ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಗೀತ ಗೋಪಿನಾಥ್ ಐಎಂಎಫ್ ನ ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನದಿಂದ ನಿರ್ಗಮಿಸಲಿದ್ದು ಜನವರಿ ತಿಂಗಳಲ್ಲಿ ಹಾರ್ವರ್ಡ್ ವಿವಿಯ ಅರ್ಥಶಾಸ್ತ್ರ ವಿಭಾಗಕ್ಕೆ ವಾಪಸ್ಸಾಗಲಿದ್ದಾರೆ ಎಂದು ಐಎಂಎಫ್ ಹೇಳಿದೆ.
ಹಾರ್ವರ್ಡ್ ವಿವಿ ಗೀತಾ ಗೋಪಿನಾಥ್ ಅವರಿಗೆ ಗೈರುಹಾಜರಿಯ ರಜೆಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಿತ್ತು. ಈ ಮೂಲಕ ಗೀತಾ ಗೋಪಿನಾಥ್ ಗೆ ಐಎಂಎಫ್ ನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಪ್ರತಿ ತ್ರೈಮಾಸಿಕದಲ್ಲಿ ಜಾಗತಿಕ ಆರ್ಥಿಕ ಮುನ್ನೋಟ ವರದಿಯನ್ನು ತಯಾರಿಸುವ ಐಎಂಎಫ್ ನ ಸಂಶೋಧಕ ವಿಭಾಗದ ನೇತೃತ್ವವನ್ನು ವಹಿಸಿರುವ ಗೀತಾ ಗೋಪಿನಾಥ್ ಅವರ ಕಾರ್ಯನಿರ್ವಹಣೆಗೆ ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜೀವಾ ಮೆಚ್ಚುಗೆ ವ್ಯಕ್ತಪಡಿಸಿದ್ದು ಆರ್ಥಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯಾಗಿದ್ದು ಇತಿಹಾಸ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.
ಐಎಂಎಫ್ ಹಾಗೂ ನಮ್ಮ ಸದಸ್ಯರಿಗೆ ಗೀತಾ ಗೋಪಿನಾಥ್ ಅವರ ಕೊಡುಗೆ ನಿಜವಾಗಿಯೂ ಗಮನಾರ್ಹ ಹಾಗೂ ಐಎಂಎಫ್ ನ ಕೆಲಸಗಳೆಡೆಗೆ ಆಕೆಯ ಪ್ರಭಾವ ಅದ್ಭುತವಾಗಿದೆ ಎಂದು ಜಾರ್ಜೀವಾ ಹೇಳಿದ್ದಾರೆ.