ಚೆನ್ನೈ: ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿತ ವಿ ಕೆ ಶಶಿಕಲಾ ನಟರಾಜನ್‌ರನ್ನು ಎಐಎಡಿಎಂಕೆ ಪಕ್ಷಕ್ಕೆ ಮರು ಸೇರ್ಪಡೆ ಮಾಡುವ ಬಗ್ಗೆ ಪಕ್ಷದ ಹೈಕಮಾಂಡ್ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಪಕ್ಷದ ನಾಯಕ ಒ. ಪನ್ನೀರ್ ಸೆಲ್ವಂ ಸೋಮವಾರ ತಿಳಿಸಿದ್ದಾರೆ.
"ರಾಜಕೀಯ ಎಂಬುವುದಕ್ಕೆ ಯಾರೂ ಕೂಡಾ ಬರಬಹುದು ಹಾಗೂ ಹೋಗಬಹುದು. ಪಕ್ಷದ ಹೈಕಮಾಂಡ್ ಚರ್ಚೆ ನಡೆಸಲಿದೆ ಮತ್ತು ವಿ ಕೆ ಶಶಿಕಲಾರನ್ನು ಮತ್ತೆ ಎಐಎಡಿಎಂಕೆ ಪಕ್ಷಕ್ಕೆ ಸೆರ್ಪಡೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಶಶಿಕಲಾರನ್ನು ಪಕ್ಷಕ್ಕೆ ಸೇರ್ಪಡೆ ಮಾಡಲಾಗುವುದಿಲ್ಲ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ ಬಳಿಕ ಮಾಜಿ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ವಿ ಕೆ ಶಶಿಕಲಾರನ್ನು ಎಐಎಡಿಎಂಕೆ ಪಕ್ಷಕ್ಕೆ ಮರು ಸೇರ್ಪಡೆ ಮಾಡುವ ಬಗ್ಗೆ ಪಕ್ಷದ ಹೈಕಮಾಂಡ್ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಶಶಿಕಲಾ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಆಗಲಿದ್ದಾರೆಯೇ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ, "ನೀವು ಮಾಧ್ಯಮದವರು ಅನಗತ್ಯ ಪ್ರಾಮುಖ್ಯತೆಯನ್ನು ನೀಡುತ್ತಿದ್ದೀರಿ. 2017 ರಲ್ಲಿ ಉಚ್ಚಾಟನೆಯಾದಾಗಿನಿಂದ ಶಶಿಕಲಾ ಹಾಗೂ ಎಐಎಡಿಎಂಕೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡ ಶಶಿಕಲಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ "ಮಾಜಿ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ನನ್ನ ನಡುವೆ ಯಾವುದೇ ರೀತಿಯ ಶೀಥಲ ಸಮರವಿಲ್ಲ. ಹಾಗೆಯೇ ಪಕ್ಷದಲ್ಲಿ ಶಶಿಕಲಾ ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ಕಾರಣಕ್ಕೂ ಸ್ಥಾನವಿಲ್ಲ. ಶಶಿಕಲಾ ಎಐಎಡಿಎಂಕೆ ಪಕ್ಷದೊಂದಿಗೆ ಇಲ್ಲ. ಈಗಾಗಲೇ ಶಶಿಕಲಾ ರಾಜಕೀಯದಿಂದ ದೂರ ಸರಿದಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಈಗ ಎಐಎಡಿಎಂಕೆ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದು, ಇದು ಕೇವಲ ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡುವ ಉದ್ದೇಶದಿಂದ ಮಾಡುತ್ತಿರುವ ಕಾರ್ಯ," ಎಂದು ಆರೋಪ ಮಾಡಿದ್ದಾರೆ.
ರಾಜಕೀಯ ಪ್ರವೇಶದ ಬಗ್ಗೆ ತಿಳಿಸಿದ್ದ ಶಶಿಕಲಾ
ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹಿಂದಕ್ಕೆ ಬಂದ ಬಳಿಕ ತಾನು ಮತ್ತೆ ರಾಜಕೀಯದಲ್ಲಿ ಸಕ್ರಿಯ ಆಗುವ ಬಗ್ಗೆ ಸುಳಿವು ನೀಡಿದ್ದರು. ಜೈಲು ಶಿಕ್ಷೆ ಅನುಭವಿಸಿದ ಬಳಿಕ ತಮಿಳುನಾಡಿಗೆ ವಾಪಸಾಗಿರುವ ಶಶಿಕಲಾ, ಸಕ್ರಿಯ ರಾಜಕಾರಣಕ್ಕೆ ಮರಳುವುದಾಗಿ ತಿಳಿಸಿದ್ದರು. "ನಿಮ್ಮನ್ನು ಶೀಘ್ರವೇ ಭೇಟಿಯಾಗಲಿದ್ದೇನೆ; ಪೂರ್ಣ ಪ್ರಮಾಣದ ರಾಜಕೀಯಕ್ಕೆ ಪ್ರವೇಶಿಸಲಿದ್ದೇನೆ," ಎಂದು ಹೇಳಿದ್ದರು.
"ಎಐಎಡಿಎಂಕೆ ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಆದರೆ ಫೀನಿಕ್ಸ್ ರೀತಿ ಎದ್ದು ಬಂದಿದೆ. ಎಲ್ಲರೂ ಜತೆಗೂಡಿ ಕೆಲಸ ಮಾಡಿ ನಮ್ಮ ಸಾಮಾನ್ಯ ವೈರಿಯನ್ನು ಬಗ್ಗುಬಡಿಯಬೇಕು ಎಂಬುವುದು ನನ್ನ ಆಶಯ. ನಾನು ಎಂದಿಗೂ ದಬ್ಬಾಳಿಕೆಗೆ ಶರಣಾಗುವುದಿಲ್ಲ. ಪಕ್ಷದ ಕಾರ್ಯಕರ್ತರಿಗಾಗಿ ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ತಮಿಳು ನೀತಿ ಮತ್ತು ನಾನು ತೆಗೆದುಕೊಳ್ಳುವ ತತ್ವಗಳಿಗೆ ಬದ್ಧಳಾಗಿರುತ್ತೇನೆ," ಎಂದಿದ್ದರು.
ಪನ್ನೀರ್ ಸೆಲ್ವಂರ ಪತ್ನಿ ವಿಜಯಲಕ್ಷ್ಮೀ ಸೆಪ್ಟಂಬರ್ ಒಂದರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನಿಂದ ಒತ್ತಡದಲ್ಲಿದ್ದ ಸೆಲ್ವಂ ನಿವಾಸಕ್ಕೆ ಇತ್ತೀಚೆಗೆ ಭೇಟಿ ನೀಡಿ ಶಶಿಕಲಾ ನಟರಾಜನ್ ಸಾಂತ್ವನ ಹೇಳಿ ಬಂದಿದ್ದಾರೆ. ಶಶಿಕಲಾ ಎಐಎಡಿಎಂಕೆಗೆ ಮತ್ತೆ ಸೇರಿಸಿಕೊಳ್ಳುವಲ್ಲಿ ಪ್ರಬಲ ಪ್ರತಿರೋಧ ತೋರಿದವರು ಇದೇ ಪನ್ನೀರ್ ಸೆಲ್ವಂ. ಈ ನಿಟ್ಟಿನಲ್ಲಿ ಶಶಿಕಲಾ ಭೇಟಿ ಮಹತ್ವವನ್ನು ಪಡೆದುಕೊಂಡಿತ್ತು. ಈಗ ಶಶಿಕಲಾರನ್ನು ಎಐಎಡಿಎಂಕೆ ಪಕ್ಷಕ್ಕೆ ಮರು ಸೇರ್ಪಡೆ ಮಾಡುವ ಬಗ್ಗೆ ಪಕ್ಷದ ಹೈಕಮಾಂಡ್ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.