ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೂತನ ಅಧ್ಯಕ್ಷರನ್ನಾಗಿ ಕುಂಟಾರು ರವೀಶ ತಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಹಾಲಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರನ್ನು ರಾಜ್ಯ ಸಮಿತಿ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ರಾಜ್ಯ ಸಮಿತಿ ಮಂಗಳವಾರ ಈ ಬಗ್ಗೆ ಅಧಿಕೃತ ಘೋಷಣೆ ನಡೆಸಿದೆ.
ಹಿಂದೂ ಐಕ್ಯವೇದಿ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿದ್ದ ಕುಂಟಾರು ರವೀಶ ತಂತ್ರಿ ಅವರು ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರು.ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿದ್ದ ಇವರು, ಕಾಸರಗೋಡು ಲೋಕಸಭೆ, ಮಂಜೇಶ್ವರ, ಕಾಸರಗೋಡು ವಿಧಾನಸಭಾ ಚುನಾವಣೆಗಳಲ್ಲೂ ಎನ್‍ಡಿಎಯಿಂದ ಸ್ಪರ್ಧಿಸಿದ್ದರು. ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ರವೀಶ ತಂತ್ರಿ ಅವರು ಉತ್ತಮ ಸಂಘಟಕ, ವಾಗ್ಮಿಯಾಗಿಯೂ ಹೆಸರು ಗಳಿಸಿದ್ದಾರೆ.
ಹೋರಾಟದ ಮೂಲಕ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿರುವ ವಕೀಲ ಕೆ.ಶ್ರೀಕಾಂತ್ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆಸಲ್ಲಿಸಿದ್ದು, ಉತ್ತಮ ಭಾಷಣಕಾರರಾಗಿದ್ದಾರೆ. ಕನ್ನಡ ಮತ್ತು ಮಲೆಯಾಳ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರಗಳಿಂದ ಎನ್‍ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ವಕ್ತಾರರಾಗಿ ಪ್ರಖರ ವಾಗ್ಮಿ, ಯುವ ಮುಖಂಡ ಸಂದೀಪ್ ವಾಚಸ್ಪತಿ ಅವರನ್ನು ಆಯ್ಕೆ ಮಾಡಲಾಗಿದೆ.