ಬದಿಯಡ್ಕ: ಕೋವಿಡ್ ಹಿನ್ನೆಲೆಯಲ್ಲಿ ಸುಧೀರ್ಘ 18 ತಿಂಗಳ ಬಳಿಕ ಶಾಲೆಗಳನ್ನು ಮತ್ತೆ ತೆರುತ್ತಿರುವುದು ವಿದ್ಯಾಭ್ಯಾಸ ಇಲಾಖೆಯ ದೊಡ್ಡ ಹೆಜ್ಜೆಯಾಗಿದೆ ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಅಂಗವಾಗಿ ಆಲಂಪಾಡಿ ಶಾಲೆಯ ಪ್ರಾಥಮಿಕ ವಿಭಾಗಕ್ಕೆ ನಿರ್ಮಿಸಿದ ನೂತನ ಕಟ್ಟಡವನ್ನು ಶನಿವಾರು ಉದ್ಘಾಟಿಸಿ ಸಚಿವರು ಮಾತನಾಡಿದರು.
ಕೋವಿಡ್ ಅವಧಿ ಮತ್ತು ಮಳೆಗಾಲದ ನಡುವೆಯೂ ಸಂಘಟಿತರಾಗಿ ಜನರು ದೃಢಸಂಕಲ್ಪದಿಂದ ಮುನ್ನಡೆಯುತ್ತಿದ್ದಾರೆ. ಪ್ರಭಾಕರನ್ ಆಯೋಗದ ವರದಿಯು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಎಂಬ ಎರಡು ಕ್ಷೇತ್ರಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಒಳಗೊಂಡಿದೆ. ಇದರ ಭಾಗವಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಶಾಲಾ ಕಟ್ಟಡವನ್ನು ಮೇಲ್ದರ್ಜೆಗೇರಿಸಲಾಯಿತು. ಜಿಲ್ಲೆಯ ಶಿಕ್ಷಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಿಪ್ಬಿ, ಸರಕಾರ ಮತ್ತು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಹಲವಾರು ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಎಂಟು ತರಗತಿ ಕೊಠಡಿಗಳಿರುವ ಎರಡು ಅಂತಸ್ತಿನ ಕಟ್ಟಡ ಸಾಕಾರಗೊಂಡಿದ್ದು, ಬೌದ್ಧಿಕ ಸ್ಥಿತಿಗತಿಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಆಲಂಪಾಡಿ ಶಾಲೆಯ ಮಕ್ಕಳು ಹಾಗೂ ಶಿಕ್ಷಕರ ಬಹುದಿನಗಳ ಬೇಡಿಕೆ ಈಡೇರಿದೆ. ಹೊಸ ಪರಿಸರವು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ವಹಿಸಿದ್ದರು. ಸಮಾರಂಭದಲ್ಲಿ ಶಾಲೆಯ ಉನ್ನತ ಸಾಧಕರನ್ನು ಸನ್ಮಾನಿಸಲಾಯಿತು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮೊಹಮ್ಮದ್ ಮುನೀರ್ ವರದಿ ಮಂಡಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಾಸ್ಮಿನ್ ಚೆರ್ಕಳಂ, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಕೀನಾ ಅಬ್ದುಲ್ಲಾ ಹಾಜಿ ಗೋವಾ, ಪಂಚಾಯಿತಿ ಸದಸ್ಯೆ ಫರೀದಾ ಅಬೂಬಕ್ಕರ್, ಡಿಡಿಇ ಕೆ.ವಿ.ಪುಷ್ಪಾ, ಸಿಇಒ ಎನ್.ನಂದಿಕೇಶನ್, ತಾ.ಪಂ.ಅಧ್ಯಕ್ಷ ಅಬ್ದು ರಹ್ಮಾನ್ ಖಾಸಿ, ಪ್ರಾಚಾರ್ಯ ಝಡ್.ಎ.ಅನ್ವರ್ ಶಮೀಮ್, ಶೀಜಾ ಜೋಶಿಮ್ ಮಾತನಾಡಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್ ಸ್ವಾಗತಿಸಿ, ಪ್ರಾಂಶುಪಾಲ ಸತೀಶ್ ಕುಮಾರ್ ಎಂ.ಪಿ.ವಂದಿಸಿದರು.