ಭವಾನಿಪುರ:ಸಿಎಂ ಮಮತಾ ಬ್ಯಾನರ್ಜಿಗೆ ಸಿಎಂ ಪಟ್ಟ ಭದ್ರವಾಗಿದೆ. ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ ವಿರುದ್ಧ 58 ಸಾವಿರದ 389 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕೋಲ್ಕತ್ತಾದ ಟಿಎಂಸಿ ಕಚೇರಿ ಮುಂದೆ ಮತ್ತು ಸಿಎಂ ಮಮತಾ ನಿವಾಸದ ಹೊರಗೆ ಸಂಭ್ರಮ ಮನೆಮಾಡಿದೆ. ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಂಡಿದ್ದರು. ಆದರೂ ಟಿಎಂಸಿಗೆ ಬಹುಮತ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾದರು.
ಅದಾಗಿ ಆರು ತಿಂಗಳ ಬಳಿಕ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಗೆಲುವು ಮಮತಾ ಬ್ಯಾನರ್ಜಿಗೆ ಸಿಎಂ ಖುರ್ಚಿ ಉಳಿಸಿಕೊಳ್ಳಲು ಅನಿವಾರ್ಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲದ ಹಿನ್ನೆಲೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಉಪ ಚುನಾವಣೆ ನಡೆದಿತ್ತು.
ಇಂದು ಹದಿನಾರನೇ ಸುತ್ತಿನ ಮತ ಎಣಿಕೆಯ ನಂತರ ಮಮತಾ ಬ್ಯಾನರ್ಜಿಯವರು 52 ಸಾವಿರದ 017 ಮತಗಳಿಂದ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಅವರಿಂದ ಮುನ್ನಡೆಯಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. 2011 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ತನ್ನ ಪಕ್ಷದ ಗೆಲುವಿನ ಅಂತರ 49 ಸಾವಿರದ 936 ಮತಗಳನ್ನು ಈ ಬಾರಿ ಮುರಿದು ದಾಖಲೆ ಬರೆದಿದ್ದಾರೆ. ಆ ವರ್ಷವೇ ಅವರು ಎಡರಂಗದ 34 ವರ್ಷಗಳ ಆಡಳಿತವನ್ನು ಸೋಲಿಸಿ ಟಿಎಂಸಿಯನ್ನು ಅಧಿಕಾರಕ್ಕೆ ತಂದಿದ್ದರು.
ಮುರ್ಷಿದಾಬಾದ್‌ನ ಸಂಸರ್‌ಗಂಜ್ ಮತ್ತು ಜಂಗೀಪುರ ಉಪ ಚುನಾವಣೆಗಳಲ್ಲಿ ಸಹ ಟಿಎಂಸಿ ಮುಂಚೂಣಿಯಲ್ಲಿದೆ, ಮತ ಎಣಿಕೆ ಕಾರ್ಯ ಮುಂದುವರಿದಿದೆ. ಏಳನೇ ಸುತ್ತಿನ ಎಣಿಕೆಯ ನಂತರ ಅಧಿಕೃತ ಮಾಹಿತಿಯ ಪ್ರಕಾರ, ದಕ್ಷಿಣ ಕೋಲ್ಕತ್ತಾದ ಭವಾನಿಪುರ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಬ್ಯಾನರ್ಜಿ 76 ಸಾವಿರದ 413 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ 24,396 ಮತಗಳನ್ನು ಪಡೆದಿದ್ದರು.
ಭವಾನಿಪುರದ ಮತದಾರರ ತೀರ್ಪು ನಂದಿಗ್ರಾಮದಲ್ಲಿ ನನ್ನ ವಿರುದ್ಧ ರೂಪಿಸಲಾದ ಪಿತೂರಿಗೆ ಉತ್ತರವಾಗಿದೆ. ನಾನು ಭವಾನಿಪುರ ಪೌರ ಸಂಸ್ಥೆಯ ಎಲ್ಲಾ ವಾರ್ಡ್‌ಗಳಿಂದ ಮುನ್ನಡೆ ಕಾಯ್ದುಕೊಂಡಿದ್ದೇನೆ "ಎಂದು ಉಪಚುನಾವಣೆಯಲ್ಲಿ ಗೆದ್ದ ನಂತರ ಮಮತಾ ಬ್ಯಾನರ್ಜಿ ಹೇಳಿದರು.