ನವದೆಹಲಿ: ಅಮೆರಿಕ ಮತ್ತು ತಾಲಿಬಾನ್ ನಡುವೆ ಕಳೆದ ವರ್ಷ ನಡೆದಿದ್ದ ದೋಹಾ ಒಪ್ಪಂದದ ವೇಳೆ ಅನೇಕ ವಿಷಯಗಳಿಗೆ ಸಂಬಂಧಿಸಿ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಆದರೆ, ಇದೇ ವೇಳೆ ಅವರು ಅಫ್ಗಾನಿಸ್ತಾನ ನೆಲವನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಬಹುದು ಎಂಬ ಆತಂಕವು ಸೇರಿ ಅಫ್ಗನ್ ಬೆಳವಣಿಗೆಯನ್ನು ಕುರಿತಂತೆ ಅಮೆರಿಕ ಮತ್ತು ಭಾರತದ ಚಿಂತನೆಯು ಏಕಪ್ರಕಾರವಾಗಿದೆ ಎಂದು ಹೇಳಿದರು.
ಅಮೆರಿಕ-ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆ (ಯುಎಸ್‌ಐಎಸ್‌ಪಿಎಫ್) ಗುರುವಾರ ಏರ್ಪಡಿಸಿದ್ದ ಶೃಂಗಸಭೆಯಲ್ಲಿ ವರ್ಚುಯಲ್ ವೇದಿಕೆಯಲ್ಲಿ ಅವರು, ಅಫ್ಗಾನಿಸ್ತಾನದ ಕೆಲ ಬೆಳವಣಿಗೆಗೆ ಸಂಬಂಧಿಸಿ ಭಾರತ-ಅಮೆರಿಕದ ಸ್ಥಿತಿ ಏಕಪ್ರಕಾರವಾಗಿದೆ ಎಂದು ತಿಳಿಸಿದರು.
ಭಾರತ-ಅಮೆರಿಕ ಚಿಂತನೆ ಏಕಪ್ರಕಾರ ಇದ್ದರೂ, ದೋಹಾ ಒಪ್ಪಂದದ ವೇಳೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಇದು, ಅಮೆರಿಕಕ್ಕೂ ಅರಿವಿದೆ ಎಂದು ಜೈಶಂಕರ್ ಹೇಳಿದರು.
ಕಳೆದ ಫೆಬ್ರುವರಿಯಲ್ಲಿ ದೋಹಾ ಒಪ್ಪಂದ ಆಗಿದ್ದು, ಆ ಪ್ರಕಾರ ಹಿಂಸಾಕೃತ್ಯಕ್ಕೆ ಕೊನೆ ಹಾಡಬೇಕು ಎಂಬ ಷರತ್ತು ಒಳಗೊಂಡಂತೆ ಅಫ್ಗಾನಿಸ್ತಾನದ ನೆಲದಿಂದ ಸೇನೆಯನ್ನು ವಾಪಸು ಕರೆಸಿಕೊಳ್ಳಲು ಅಮೆರಿಕ ಒಪ್ಪಿತ್ತು.
ಅಫ್ಗಾನಿಸ್ತಾನ ಬೆಳವಣಿಗೆಗಳು ಈಚೆಗೆ ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನ ನರೇಂದ್ರ ಮೋದಿ ಅವರ ಭೇಟಿಯ ವೇಳೆಯಲ್ಲಿಯೂ ಚರ್ಚೆಗೆ ಬಂದಿತ್ತು.