ನವದೆಹಲಿ: ಹೃದಯ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಅಳವಡಿಸುವ ಕೃತಕ ಹೃದಯ ಉಪಕರಣವನ್ನು ಮರಳಿ ಹೊರತೆಗೆಯುವುದು ಅತ್ಯಂತ ಕ್ಲಿಷ್ಟಕರ ಕ್ರಿಯೆ. ಈ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ಯಶಸ್ವಿಯಾಗಿ ನಡೆಸಿದೆ. ಈ ಮಾದರಿಯ ಯಶಸ್ವಿ ಶಸ್ತ್ರಚಿಕಿತ್ಸೆ ದೇಶದಲ್ಲೇ ಮೊದಲಿನದ್ದಾಗಿದೆ.
ಈ ಕುರಿತು ಮಂಗಳವಾರ ವರ್ಚುವಲ್ ಮೂಲಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೋಯ್ಡ ಫೋರ್ಟಿಸ್ ಹಾರ್ಟ್ ಆಂಡ್ ವ್ಯಾಸ್ಕಲರ್ ಇನ್ ಸ್ಟಿಟ್ಯೂಟ್ ಅಧ್ಯಕ್ಷ ಡಾ. ಅಜಯ್ ಕೌಲ್, ಭಾರತದಲ್ಲೇ ಇದೇ ಮೊದಲ ಬಾರಿಗೆ, ವ್ಯಕ್ತಿಗೆ ಅಳವಡಿಸಲಾಗಿದ್ದ ಕೃತಕ ಹೃದಯವನ್ನು ಸಂಪೂರ್ಣವಾಗಿ ತೆಗೆದುಹಾಕುವ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ವಿಶ್ವದಲ್ಲಿಯೇ ಇಂಥ ಶಸ್ತ್ರಚಿಕಿತ್ಸೆ ಅತ್ಯಂತ ವಿರಳವಾದದ್ದು ಎಂದು ಹೇಳಿದರು.
ಏನಿದು ಪ್ರಕರಣ: ಇರಾಕ್ ದೇಶದ 56 ವರ್ಷ ವಯಸ್ಸಿನ ಪುರುಷ ರೋಗಿಯು ಸಂಪೂರ್ಣ ಹೃದಯ ವೈಫಲ್ಯದ ಸಮಸ್ಯೆ ಅನುಭವಿಸುತ್ತಿದ್ದರು. ಇವರಿಗೆ ಹೃದಯ ಕಸಿ ಅನಿರ್ವಾಯವಾಗಿತ್ತು. ಆದರೆ, ಹೃದಯ ದಾನ ಮಾಡುವವರ ಕೊರತೆಯಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆಯಲ್ಲೇ ಮುಂದುವರೆದಿದ್ದರು. ಆದರೆ, ಪರಿಸ್ಥಿತಿ ಕೈ ಮೀರಿದ ಬಳಿಕ ಅವರಿಗೆ ಕೃತಕ ಹೃದಯ ಅಳವಡಿಕೆ ಮಾಡಲು ನಿರ್ಧರಿಸಿ ಲೆಫ್ಟ್ ವೆಂಟ್ರಿಕುಲರ್ ಅಸಿಸ್ಟ್ ಡಿವೈಸ್ ರಕ್ತ ಪಂಪ್ ಮಾಡುವ ಡಿವೈಸ್ ನ್ನು ಅಳವಡಿಸಲಾಯಿತು. ಇದನ್ನು ಕೃತಕ ಹೃದಯದ ಎನ್ನಲಾಗುವುದು. ಸಾಮಾನ್ಯವಾಗಿ ಕೃತಕ ಹೃದಯ ಅಳವಡಿಸಿದ ಬಳಿಕ ಅದು ಹಾಗೇ ಮುಂದುವರೆಯಬೇಕಾಗುತ್ತದೆ. ಇದರ ಸಹಾಯವಿಲ್ಲದೇ ಹೃದಯ ಪಂಪ್ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಆದರೆ, ಈ ಪ್ರಕರಣದಲ್ಲಿ, ರೋಗಿಯು ಕೃತಕ ಹೃದಯದ ಮೂಲಕ ಕಾಲ ಕ್ರಮೇಣ ಇವರ ಹೃದಯ ಗುಣವಾಗುತ್ತಾ ಬಂದಿತ್ತು. ಎಲ್ ವಿಎಡಿ ಸಹಾಯವಿಲ್ಲದೇ ಹೃದಯ ಪಂಪ್ ಆಗುತ್ತಿತ್ತು. ಹೀಗಾಗಿ ಕೃತಕ ಹೃದಯವನ್ನು ಸಂಕೀರ್ಣ ಚಿಕಿತ್ಸೆ ಮೂಲಕ ತೆಗೆದು ಹಾಕುವುದು ವೈದ್ಯಕೀಯ ಕ್ಷೇತ್ರಕ್ಕೇ ದೊಡ್ಡ ಸವಾಲಾಗಿತ್ತು. ಆದರೆ, ವೈದ್ಯರ ತಂಡ, ಹೊಸ ಪ್ರಯೋಗದೊಂದಿಗೆ 12 ಗಂಟೆಗಳ ಶಸ್ತ್ರಚಿಕಿತ್ಸೆಯ ತರುವಾಯ ಯಶಸ್ವಿಯಾಗಿ ಕೃತಕ ಹೃದಯವನ್ನು ತೆಗೆದು ಹಾಕಲಾಗಿದೆ ಎಂದು ಅವರು ಹೇಳಿದರು.
ಈ ಶಸ್ತ್ರಚಿಕಿತ್ಸೆ ದೇಶದಲ್ಲೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದು ನಮ್ಮ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡಕ್ಕೆ ಸಂದ ಜಯವಾಗಿದೆ ಎಂದು ಅಜಯ್ ಕೌಲ್ ವಿವರಿಸಿದರು.