ನವದೆಹಲಿ: ಕೋವಿಡ್-19 ಪಿಡುಗಿನಿಂದಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚಿದೆ. ಆದರೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಪ್ರಸಕ್ತ ಹಣಕಾಸು ವರ್ಷದಲ್ಲಿ ತೀವ್ರ ಅನುದಾನದ ಕೊರತೆ ಇದೆ ಎಂದು 'ಪೀಪಲ್ಸ್ ಆಯಕ್ಷನ್ ಫಾರ್ ಎಂಪ್ಲಾಯ್‌ಮೆಂಟ್ ಗ್ರಾರಂಟಿ (ಪಿಎಇಜಿ) ಎಂಬ ಸಂಘಟನೆ ಹೇಳಿದೆ.
ಇದಕ್ಕೆ ಶನಿವಾರ ಪ್ರತಿಕ್ರಿಯಿಸಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ನರೇಗಾದಡಿ ಕೂಲಿ ಹಾಗೂ ಸಾಮಗ್ರಿಗಳ ಖರೀದಿಗೆ ಬೇಕಾದ ಹಣವನ್ನು ಬಿಡುಗಡೆ ಮಾಡಲು ಬದ್ಧ ಎಂದು ಹೇಳಿದೆ. ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿ ಅನುದಾನದ ಅಗತ್ಯ ಕಂಡುಬಂದಾಗ ಹಣ ಬಿಡುಗಡೆ ಮಾಡುವಂತೆ ಹಣಕಾಸು ಸಚಿವಾಲಯವನ್ನು ಕೋರಲಾಗಿದೆ ಎಂದೂ ಸ್ಪಷ್ಟಪಡಿಸಿದೆ.
ಪಿಎಇಜಿ ಕಾರ್ಯಕರ್ತರು ಈ ಹಿಂದೆ ನರೇಗಾ ಅಡಿ ರಚನೆಯಾಗಿದ್ದ 'ಕೇಂದ್ರೀಯ ಉದ್ಯೋಗ ಖಾತರಿ ಪರಿಷತ್ತಿನ' ಸದಸ್ಯರಾಗಿದ್ದರು.
'2021-22ನೇ ಸಾಲಿಗೆ ನರೇಗಾಕ್ಕೆ ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 34ರಷ್ಟು ಕಡಿಮೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ' ಎಂದು ಸಂಘಟನೆಯ ಸದಸ್ಯ ನಿಖಿಲ್ ಡೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರದ ಬಜೆಟ್‌ನಲ್ಲಿ 2020-21ನೇ ಸಾಲಿಗೆ ನರೇಗಾಕ್ಕೆ ₹ 1.11 ಲಕ್ಷ ಕೋಟಿ ಹಂಚಿಕೆ ಮಾಡಲಾಗಿತ್ತು. ಈ ಯೋಜನೆಗೆ ಪ್ರಸಕ್ತ ಹಣಕಾಸು ವರ್ಷಕ್ಕೆ ₹ 73,000 ಕೋಟಿ ಹಂಚಿಕೆ ಮಾಡಲಾಗಿದೆ.