ನವದೆಹಲಿ: ಪ್ರತಿಪಕ್ಷಗಳು ತಮ್ಮ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಟೀಕಿಸುತ್ತಿರುವುದು "ಬೌದ್ಧಿಕ ಅಪ್ರಾಮಾಣಿಕತೆ" ಮತ್ತು "ರಾಜಕೀಯ ವಂಚನೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ದಶಕಗಳ ಹಿಂದೆಯೇ ದೇಶದ ಜನರಿಗೆ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಕಲ್ಪಿಸಲು ಕಠಿಣ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕೃಷಿ ಕಾನೂನುಗಳನ್ನು ದೃಢವಾಗಿ ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ಒಂದು ರಾಜಕೀಯ ಪಕ್ಷವು ತಾನು ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಅದು ವಂಚನೆಯಾಗಲಿದೆ. ಆದರೆ "ನಿರ್ದಿಷ್ಟವಾಗಿ ಅನಪೇಕ್ಷಿತ" ಮತ್ತು "ಅಸಹ್ಯಕರ" ಲಕ್ಷಣವೆಂದರೆ ಕೆಲ ಪಕ್ಷಗಳು ಕೃಷಿ ಸುಧಾರಣೆ ಕುರಿತು ಭರವಸೆ ನೀಡಿದ್ದವು. ನಮ್ಮ ಸರ್ಕಾರ ಆ ಸುಧಾರಣೆಗಳನ್ನು ಜಾರಿಗೊಳಿಸಿದರೆ ಆ ಪಕ್ಷಗಳು ಈಗ ಯು-ಟರ್ ಹೊಡೆದು ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸುತ್ತಿವೆ ಎಂದು ಹೇಳಿದರು.
ಒಪನ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ, "ಭಾರತದ ಜನರು ಕೆಲವು ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಸೌಲಭ್ಯಗಳು ದಶಕಗಳ ಹಿಂದೆಯೇ ಅವರಿಗೆ ಸಿಗಬೇಕಿತ್ತು. ಆದರೆ ಇನ್ನೂ ಸಿಕ್ಕಲ್ಲ. ಅದಕ್ಕಾಗಿ ಇನ್ನೂ ಕಾಯುವಂತಹ ಪರಿಸ್ಥಿತಿ ಬೇಡ. ಈಗ ನಾವು ಆ ಸೌಲಭ್ಯಗಳನ್ನು ತಲುಪಿಸಲು ದೊಡ್ಡ ಮತ್ತು ಕಠಿಣ ನಿರ್ಧಾರ ಅಗತ್ಯ ಎಂದು ಹೇಳಿದ್ದಾರೆ.