ನವದೆಹಲಿ: ದೆಹಲಿಯ ಹೊರಭಾಗದ ಸಿಂಘು ಗಡಿಯಲ್ಲಿ ರೈತನೋರ್ವ ಬರ್ಬರ ಹತ್ಯೆಯಾಗಿದ್ದು, ಕೈ ಕಾಲು ಕತ್ತರಿಸಿ ಮೃತ ದೇಹವನ್ನು ದುಷ್ಕರ್ಮಿಗಳು ಬ್ಯಾರಿಕೇಡ್ ಗೆ ಕಟ್ಟಿಹಾಕಿ ಕ್ರೂರತೆ ಮೆರೆದಿದ್ದಾರೆ.
ಸುಮಾರು 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಕೈಕಾಲುಗಳನ್ನು ಕತ್ತರಿಸಿದ್ದ ರೈತನ ಮೃತದೇಹ ಶುಕ್ರವಾರ ಬೆಳಿಗ್ಗೆ ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆಯ ಬಳಿ ಬ್ಯಾರಿಕೇಡ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಪೊಲೀಸರ ಭೇಟಿಗೆ ರೈತರು ಅವಕಾಶ ನೀಡದೆ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಕುಂಡ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮೃತದೇಹವನ್ನು ಹತ್ತಿರದ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲು ಅನುಮತಿ ನೀಡಿದರು.
ಈ ಘಟನೆಯಲ್ಲಿ ನಿಹಾಂಗ್ ಸಿಖ್ (ಯೋಧ ಸಮುದಾಯ) ಗುಂಪನ್ನು ದೂಷಿಸಲಾಗುತ್ತಿದ್ದು, ಆದರೂ ಇದನ್ನು ಅಧಿಕಾರಿಗಳು ದೃಢೀಕರಿಸಿಲ್ಲ. ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಆ ವ್ಯಕ್ತಿಯನ್ನು ಹೊಡೆದು ಕೊಂದು ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ವಿಡಿಯೋ ವೈರಲ್
ಈ ಕೊಲೆಯ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವ್ಯಕ್ತಿಯ ಕೈಯನ್ನು ಕತ್ತರಿಸಿದ ನಂತರ ರಕ್ತದ ಮಡುವಿನಲ್ಲಿ ಜೀವಂತವಾಗಿದ್ದಾಗ ಆತನಿಂದ ಹೇಳಿಕೆ ಪಡೆಯುತ್ತಿದ್ದಾರೆ. ಆ ವ್ಯಕ್ತಿಯ ಹೆಸರು ಮತ್ತು ತನ್ನ ಮೂಲ ಹಳ್ಳಿಯ ವಿವರಗಳನ್ನು ಹೇಳುವಂತೆ ಒತ್ತಾಯಿಸಲಾಗುತ್ತಿದೆ.