ಕಣ್ಣೂರು: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಹಾಗೂ ಸಚಿವ ಎಂವಿ ಗೋವಿಂದನ್ ಅವರ ಖಾಸಗಿ ಕಾರ್ಯದರ್ಶಿ ವಿಪಿಪಿ ಮುಸ್ತಫಾ ಅವರನ್ನು ಸಿಬಿಐ ಪ್ರಶ್ನಿಸಿದೆ. ಸಿಬಿಐ ಡಿವೈಎಸ್ಪಿ ಟಿಪಿ ಅನಂತಕೃಷ್ಣನ್, ಇತರ ತನಿಖಾಧಿಕಾರಿಗಳು ಅವರನ್ನು ಪ್ರಶ್ನಿಸಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್ ಮತ್ತು ಕೃಪೇಶ್ ಹತ್ಯೆಗೆ ಒಂದು ತಿಂಗಳ ಮೊದಲು ಕಲ್ಯೋಟ್ ನಲ್ಲಿ ನಡೆದ ಸಭೆಯಲ್ಲಿ ಮುಸ್ತಫಾ ಮಾಡಿದ ಭಾಷಣ ವಿವಾದಾಸ್ಪದವಾಗಿತ್ತು. ಪ್ರಕರಣದ ತನಿಖೆ ನಡೆಸಿದ ಕ್ರೈಂ ಬ್ರಾಂಚ್ ತಂಡವು ಮುಸ್ತಫಾ ಅವರನ್ನು ಈ ಹಿಂದೆ ಪ್ರಶ್ನಿಸಿತ್ತು. ಡಿಸೆಂಬರ್ 4 ರೊಳಗೆ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ಸೂಚಿಸಿದೆ.