ನವದೆಹಲಿ : ಸಂಯುಕ್ತ ಅರಬ್ ಸಂಸ್ಥಾನವು ಪೆಗಾಸಸ್ ಸ್ಪೈವೇರ್ ಅನ್ನು ಬಳಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಆ ದೇಶದೊಂದಿಗಿನ ತನ್ನ 400 ಮಿಲಿಯನ್ ಪೌಂಡ್ ಮೊತ್ತದ ಒಪ್ಪಂದವೊಂದರಿಂದ ಹಿಂದೆ ಸರಿದಿದೆ. ಈ ಒಪ್ಪಂದ ಮುಂದುವರಿದಿದ್ದೇ ಆದಲ್ಲಿ ವಿಶ್ವವಿದ್ಯಾಲಯ ತನ್ನ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತದ ದೇಣಿಗೆ ಪಡೆದಂತಾಗುತ್ತಿತ್ತು. ಪೆಗಾಸಸ್ ಕುರಿತ ಹಲವು ಸುದ್ದಿಗಳು ಬಯಲುಗೊಂಡ ಹಿನ್ನೆಲೆಯಲ್ಲಿ ಸಂಯಕ್ತ ಅರಬ್ ಸಂಸ್ಥಾನದೊಂದಿಗಿನ ಎಲ್ಲಾ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿರ್ಗಮನ ಉಪಕುಲಪತಿ ಸ್ಟೀಫನ್ ಟೂಪೆ ಹೇಳಿದ್ದಾರೆ.
ಯುಎಇ ಆಡಳಿತ ಹಲವು ಮಂದಿಯ ದೂರವಾಣಿಗಳನ್ನು ಟಾರ್ಗೆಟ್ ಮಾಡಿದೆ, ಶೇಖ್ ಮುಹಮ್ಮದ್ ಪುತ್ರಿ ಲತೀಫಾ ಹಾಗೂ ಶೇಖ್ ಅವರ ಮಾಜಿ ಪತ್ನಿ, ಇಂಗ್ಲೆಂಡ್‍ಗೆ ಪಲಾಯನಗೈದಿರುವ ಹಯಾ ಅವರ ದೂರವಾಣಿಗಳನ್ನೂ ಟಾರ್ಗೆಟ್ ಮಾಡಲಾಗಿತ್ತು ಎಂದು ಪೆಗಾಸಸ್ ಕುರಿತಂತೆ ಹಲವಾರು ಮಾಧ್ಯಮ ಸಂಸ್ಥೆಗಳು ನಡೆಸಿದ್ದ ತನಿಖಾ ವರದಿ ಬಹಿರಂಗಗೊಳಿಸಿದ್ದು ಜುಲೈ ತಿಂಗಳಲ್ಲಿ ವರದಿಯಾಗಿತ್ತು.