ನವದೆಹಲಿ: ಭಾರತವನ್ನು ವಿಶ್ವದ ಅತಿ ದೊಡ್ಡ ಮಿಲಿಟರಿ ದೇಶವನ್ನಾಗಿ ಮಾಡಲು ಮಹತ್ವದ ಹೆಜ್ಜೆ ಇಟ್ಟಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಏಳು ರಕ್ಷಣಾ ಕಂಪನಿಗಳನ್ನು ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (ಒಎಫ್‌ಬಿ) ಇಲಾಖೆಯಿಂದ ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಏಳು ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸಿದೆ.
ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಸ್ವಾವಲಂಬಿ ಭಾರತದ ಅಡಿಯಲ್ಲಿ ರಾಷ್ಟ್ರವನ್ನು ತನ್ನದೇ ಆದ ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯನ್ನಾಗಿ ಮಾಡಿ, ಆಧುನಿಕ ಮಿಲಿಟರಿ ಉದ್ಯಮವನ್ನು ಅಭಿವೃದ್ಧಿಪಡಿಸುವುದು ದೇಶದ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಕಂಪನಿಗಳಿಗೆ ಈಗಾಗಲೇ 65,000 ಕೋಟಿ ಮೌಲ್ಯದ ಆರ್ಡರ್ಗಳನ್ನು ನೀಡಲಾಗಿದೆ. ಭಾರತವು ಜಾಗತಿಕ ಬ್ರ್ಯಾಂಡ್ ಆಗಲು ಈ ಕಂಪನಿಗಳು ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು, ವಾಹನಗಳು ಮತ್ತು ಸುಧಾರಿತ ತಂತ್ರಜ್ಞಾನವನ್ನು ಪೂರೈಸುತ್ತವೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸ್ಪರ್ಧಾತ್ಮಕ ವೆಚ್ಚವೇ ನಮ್ಮ ಶಕ್ತಿ ಮತ್ತು ಗುಣಮಟ್ಟವೇ ನಮ್ಮ ಚಿತ್ರ ಎಂದು ಮೋದಿ ಹೇಳಿದರು.
ರಕ್ಷಣಾ ವಲಯದಲ್ಲಿ ಆವಿಷ್ಕಾರ ಮಹತ್ವದ ಬಗ್ಗೆ ಒತ್ತಿ ಹೇಳಿದ ಪ್ರಧಾನಿ ಮೋದಿ, ಸಂಶೋಧನೆ ಮತ್ತು ಆವಿಷ್ಕಾರ ಒಂದು ದೇಶವನ್ನು ವ್ಯಾಖ್ಯಾನಿಸುತ್ತದೆ. ಭಾರತದ ಅಭಿವೃದ್ಧಿಗೆ ದೊಡ್ಡ ಉದಾಹರಣೆ ಆಗಲಿದೆ. ಹೀಗಾಗಿ ಆವಿಷ್ಕಾರ ಮಾಡುವವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಅಲ್ಲದೆ, ಕಂಪನಿಗಳು ಸಹಕಾರಿ ಸಂಶೋಧನೆಯತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮ ಗುರಿ ಕೇವಲ ಇತರ ರಾಷ್ಟ್ರಗಳಿಗೆ ಸಮನಾಗುವುದಲ್ಲ. ಜಾಗತಿಕ ವೇದಿಕೆಯಲ್ಲಿ ನಾವು ಮುನ್ನಡೆ ಸಾಧಿಸಬೇಕು ಎಂದು ಮೋದಿ ಹೇಳಿದರು. ಕಳೆದ 5 ವರ್ಷದಲ್ಲಿ ಭಾರತೀಯ ರಕ್ಷಣಾ ರಫ್ತು ಶೇ. 315 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.