ನಾವು ಒತ್ತಡದಿಂದ ರಿಲಾಕ್ಸ್ ಆಗುವುದಕ್ಕೆ ಕುಡಿಯುವ ಒಂದು ಪಾನೀಯ ಅಂದ್ರೆ ಅದು ಚಹಾ ಅಥವಾ ಟೀ. ಬಿಸಿಬಿಸಿ ಟೀ ಗಂಟಲಲ್ಲಿ ಇಳಿತಾ ಇದ್ದ ಹಾಗೆಯೇ, ದಿನದ ಎಲ್ಲಾ ಒತ್ತಡ, ಕಿರಿಕಿರಿ ಎಲ್ಲವೂ ನಿಧಾನವಾಗಿ ತಲೆಯಿಂದ ಇಳಿದುಬಿಡುತ್ತದೆ. ಆದರೆ, ಸಂದರ್ಭಕ್ಕೆ ತಕ್ಕಂತೆ ನಿಮ್ಮ ಟೀಯ ರುಚಿಯನ್ನು ಬದಲಾಯಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?
ಹೌದು, ನಿಮ್ಮ ಮನಸ್ಥಿತಿಗೆ ತಕ್ಕಂತೆ ಟೀಯನ್ನು ಕುಡಿಯಬಹುದು. ಹಾಗಾದ್ರೆ, ನಿಮ್ಮ ಮೂಡ್‌ಗೆ ಅನುಗುಣವಾಗಿ ಯಾವ ಟೀ ಕುಡಿಯುವುದು ಸೂಕ್ತ ಎಂಬುದನ್ನು ನಾವಿಂದು ಈ ಲೇಖನದಲ್ಲಿ ವಿವರಿಸಿದ್ದೇವೆ.
ಸಂತೋಷದ ಸಮಯಕ್ಕಾಗಿ ಗ್ರೀನ್ ಟೀ: ತೂಕ ನಷ್ಟಕ್ಕೆ ಮಾತ್ರ ಗ್ರೀನ್ ಟೀ ಅದ್ಭುತವಲ್ಲ, ಜೊತೆಗೆ ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಗ್ರೀನ್ ಟೀಯಲ್ಲಿ ಕೆಫೀನ್ ಇದ್ದು ಇದು ಮನಸ್ಸನ್ನು ಉಲ್ಲಾಸದಾಯಕಗೊಳಿಸುತ್ತದೆ. ಜೊತೆಗೆ ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಸಂತೋಷವನ್ನು ಅನುಭವ ಪಡೆಯಲು ಸಹಾಯ ಮಾಡುತ್ತದೆ. ಏಕೆಂದರೆ, ಗ್ರೀನ್ ಸಂತೋಷದ ಹಾರ್ಮೋನ್ ಎಂದು ಕರೆಯಲ್ಪಡುವ ಡೋಪಮೈನ್ ಬಿಡುಗಡೆಗೆ ಸಹಾಯ ಮಾಡುತ್ತದೆ ಅದು ನಿಮ್ಮ ಮನಸ್ಥಿತಿಯನ್ನು ಸ್ವಯಂಚಾಲಿತವಾಗಿ ಸುಧಾರಿಸುತ್ತದೆ.
ಕ್ರೇಜಿ ಸಾಹಸಗಳಿಗಾಗಿ ಕಾವಾ ಕಾವಾ ಟೀ: ಕಾವಾ ಕಾವಾ ಎಂಬುದು ಪೆಸಿಫಿಕ್ ನಾಡಿನಿಂದ ಬಂದಿರುವ ಸ್ಥಳೀಯ ಪಾನೀಯವಾಗಿದ್ದು, ಇದು ಪ್ರಬಲವಾದ ಉತ್ಸಾಹಭರಿತ ಪರಿಣಾಮಗಳನ್ನು ಹೊಂದಿದೆ. ಕಾವಾ ಟೀಯಲ್ಲಿರುವ ಪ್ರಮುಖ ಸಂಯುಕ್ತವನ್ನು ಕವಾಯಿನ್ ಎಂದು ಕರೆಯಲಾಗುತ್ತದೆ, ಇದು ಚಹಾವನ್ನು ಕುಡಿಯುವಾಗ ನಿಮ್ಮ ದೇಹದಲ್ಲಿರುವ ಒತ್ತಡವನ್ನು ದೂರಮಾಡಿ, ರಿಲಾಕ್ಸ್ ಮಾಡುತ್ತದೆ. ಇದರಲ್ಲಿರುವ ಇನ್ನೆರಡು ಸಂಯುಕ್ತಗಳಾದ, ಡೆಸ್ಮೆಥಿಯಾಕ್ಸಿಯಾಂಗೋನಿನ್ ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಹೆಚ್ಚಿಸಿದರೆ, ಯಂಗೋನಿನ್ ನಿಮಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ.
ಮನಸ್ಸಿನ ಶಾಂತಿಗಾಗಿ ಕ್ಯಾಮೊಮೈಲ್ ಟೀ: ಕ್ಯಾಮೊಮೈಲ್ ಟೀ, ಗ್ರೀನ್ ಟೀಯಂತೆಯೇ ಪ್ರಸಿದ್ಧವಾಗಿದ್ದು, ನಿಮ್ಮನ್ನು ಶಾಂತಿಗೊಳಿಸುವ ಮ್ಯಾಜಿಕ್ ಹೊಂದಿದೆ. ಈ ಟೀ ಕುಡಿಯುವುದರಿಂದ ನೀವು ವೇಗವಾಗಿ ನಿದ್ರಿಸಬಹುದು ಏಕೆಂದರೆ ಇದರಲ್ಲಿ ಅಪಿಜೆನಿನ್ ಎಂಬ ರಾಸಾಯನಿಕ ಸಂಯುಕ್ತವಿದ್ದು, ಇದು ಮೆದುಳಿನಲ್ಲಿರುವ ರೆಸೆಪ್ಟೆರ್‌ಗಳನ್ನು ಬಂಧಿಸಿ, ನಿದ್ದೆ ಬರುವಂತೆ ಮಾಡುತ್ತದೆ. ನಿಮ್ಮ ಮಲಗುವ ಸಮಯಕ್ಕೆ ಖಂಡಿತವಾಗಿಯೂ ಕ್ಯಾಮೊಮೈಲ್ ಚಹಾವನ್ನು ಕುಡಿಯಬೇಕು.
ಎಚ್ಚರವಾಗಿರಲು ಬ್ಲಾಕ್ ಟೀ: ಬ್ಲಾಕ್ ಟೀ, ಹೆಚ್ಚಿನ ಸಕ್ಸಸ್‌ಫುಲ್ ಜನರ ಡ್ರಿಂಕ್ ಅಂತಾನೇ ಹೇಳಬಹುದು. ಬ್ಲ್ಯಾಕ್ ಟೀ ನಿಮಗೆ ಎಚ್ಚರವಾಗಿರುವಂತೆ ಮಾತ್ರ ಮಾಡುವುದಲ್ಲದೇ, ಕೆಲಸ ಮಾಡಲು ಸಿದ್ಧಗೊಳಿಸುತ್ತದೆ. ಈ ಚಹಾದಲ್ಲಿ ಸ್ವಲ್ಪ ಪ್ರಮಾಣದ ಕೆಫೀನ್ ಇದ್ದು ಅದು ನಿಮಗೆ ಎಚ್ಚರವಾಗಿರಲು ಸಹಾಯ ಮಾಡುತ್ತದೆ.
ಬೋರಿಂಗ್ ದಿನಗಳಿಗೆ ಲೆಮನ್ ಟೀ: ನಿಮಗೆ ದುಃಖವಾಗಿದ್ದರೆ, ನಿಂಬೆ ಹಣ್ಣಿನ ಚಹಾ ನಿಮಗೆ ಉತ್ತಮ ಸ್ನೇಹಿತನಾಗಬಹುದು. ಲೆಮನ್ ಟೀ ಮನಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ಒತ್ತಡ ಮತ್ತು ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ, ಬೇಜಾರಿನ ದಿನವನ್ನ ಕಳೆಯಲು ಲೆಮನ್ ಟೀ ಆಯ್ಕೆ ಮಾಡಿಕೊಳ್ಳಬಹುದು.
ಖಿನ್ನತೆ ಅಥವಾ ವಾಕರಿಕೆಗೆ ಪುದೀನಾ ಟೀ: ಪುದೀನಾ ಟೀ ಖಂಡಿತವಾಗಿಯೂ ಕಿಕ್ ನೀಡಿ, ನಿಮ್ಮ ವಾಕರಿಕೆಯನ್ನು ದೂರ ಮಾಡುತ್ತದೆ. ಪುದೀನಾ ಎಲೆಗಳು ಮೆಂಥಾಲ್, ಮೆಂಥೋನ್ ಮತ್ತು ಲಿಮೋನೆನ್ ಅನ್ನು ಹೊಂದಿದ್ದು ವಾಕರಿಕೆ ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೇ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ಆರೋಗ್ಯಕರ ಡೋಸ್ ಪೆಪ್ಪರ್ ಮಿಂಟ್ ಟೀ ನಿಮಗೆ ಮತ್ತೆ ವಾಕರಿಕೆ ಬರದಂತೆ ನೋಡಿಕೊಳ್ಳುತ್ತದೆ.
ಅನಾರೋಗ್ಯ ಅನಿಸಿದಾಗ ಜೇನು ಮತ್ತು ನಿಂಬೆಯೊಂದಿಗೆ ಶುಂಠಿ ಚಹಾ: ಜೇನುತುಪ್ಪ ಮತ್ತು ನಿಂಬೆ ಸೇರಿಸಿದ ಶುಂಠಿ ಚಹಾ ಅನಾರೋಗ್ಯವನ್ನು ಕಡಿಮೆ ಮಾಡುವ ಉತ್ತಮ ಪರಿಹಾರವಾಗಿದೆ. ನೀವು ಗಂಟಲು ಸೋಂಕನ್ನು ಹೊಂದಿದ್ದರೆ ಇದು ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇದು ನಿಮ್ಮ ಗಂಟಲನ್ನು ಸುಲಭವಾಗಿ ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಶುಂಠಿಯಲ್ಲಿರುವ ಜಿಂಜರಾಲ್ ಎಂದು ಸಂಯುಕ್ತವು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಹೊಂದಿದ್ದು, ಜೇನುತುಪ್ಪ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂರನ್ನೂ ಒಂದುಗೂಡಿಸುವುದು ಅನಾರೋಗ್ಯದ ಸಮಯಕ್ಕೆ ಅತ್ಯುತ್ತಮವಾದ ಚಹಾ ಆಗಿದೆ.
ಪಾಸಿಟಿವ್ ವೈಬ್‌ಗೆ ಮಸಾಲಾ ಟೀ: ಮಸಾಲಾ ಟೀ ಭಾರತೀಯರಿಗೆ ಪ್ರತಿ ಸಂಜೆ ಮತ್ತು ಬೆಳಿಗ್ಗಿನ ದಿನಚರಿಯಲ್ಲಿ ಒಂದಾಗಿದೆ. ಚಹಾಗಳ ರಾಜನಾಗಿರುವ ಈ ಟೀ, ಯಾವುದೇ ಸಮಯದಲ್ಲಿ ನಿಮಗೆ ಧನಾತ್ಮಕ, ಸಂತೋಷ ಮತ್ತು ಲವಲವಿಕೆಯನ್ನು ನೀಡುತ್ತದೆ. ಮಸಾಲಾ ಚಹಾದಲ್ಲಿ ಕೆಫೀನ್ ವರ್ಧಕಕ್ಕೆ ಕಪ್ಪು ಚಹಾ ಎಲೆಗಳು, ರೋಗನಿರೋಧಕ ಶಕ್ತಿ ಹೆಚ್ಚಿಸಲು ದಾಲ್ಚಿನ್ನಿ ಮತ್ತು ಲವಂಗ, ರಕ್ತ ಪರಿಚಲನೆಗೆ ಶುಂಠಿ, ತುಳಸಿ ಮತ್ತು ಉತ್ತಮ ಜೀರ್ಣಾಂಗ ವ್ಯವಸ್ಥೆಗಾಗಿ ಅದ್ಭುತ ಪದಾರ್ಥಗಳ ಮಿಶ್ರಣವಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂನೊಂದಿಗೆ ಈ ಪದಾರ್ಥಗಳು ಸೇರಿಕೊಂಡರೆ ನಿಮಗೆ ಉಲ್ಲಾಸ, ಸಂತೋಷದ ಅನುಭವ ನೀಡುತ್ತದೆ.