ನವದೆಹಲಿ: ದೇಶದಲ್ಲಿ ಇದುವರೆಗೂ ಸುಮಾರು 60% ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಈಚಿನ ಸೆರೊಸರ್ವೇ ಹೇಳಿದ್ದು, ಈ ಸಮೀಕ್ಷೆ ಉಲ್ಲೇಖಿಸಿ ಏಮ್ಸ್ ಪ್ರೊಫೆಸರ್ ಸೋಮವಾರ ಕೊರೊನಾ ಲಸಿಕೆಯ ಪ್ರಯೋಜನಗಳ ಕುರಿತು ಮಾತನಾಡಿದ್ದಾರೆ.
ದೇಶದಲ್ಲಿ ಹೆಚ್ಚಿನ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿರುವ ಕುರಿತು ಸೆರೊಸರ್ವೇ ತಿಳಿಸಿದೆ. ಆದರೆ ಕೊರೊನಾ ಲಸಿಕೆಗಳು 18 ವರ್ಷಕ್ಕೂ ಕಡಿಮೆ ವಯಸ್ಸಿನವರಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಸಮರ್ಥಿಸುವ ಯಾವುದೇ ಅಧ್ಯಯನಗಳು ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
'ಐಸಿಎಂಆರ್ ನಡೆಸಿದ ಸೆರೊಸರ್ವೇ, ದೇಶದಲ್ಲಿ ಸುಮಾರು 60% ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದೆ. ಮಕ್ಕಳಲ್ಲಿ ಸೋಂಕಿನಿಂದ ಮರಣ ಪ್ರಮಾಣ ದಶಲಕ್ಷದಲ್ಲಿ ಎರಡು ಆಗಿದೆ. ಇದು ಅತಿ ಕನಿಷ್ಠವಾಗಿದೆ' ಎಂದು ಏಮ್ಸ್ ಸೆಂಟರ್ ಫಾರ್ ಕಮ್ಯುನಿಟಿ ಮೆಡಿಸಿನ್ ಪ್ರೊಫೆಸರ್ ಡಾ. ಸಂಜಯ್ ಕೆ ರೈ ತಿಳಿಸಿದ್ದಾರೆ.
ಮಕ್ಕಳಿಗೆ ಕೊರೊನಾ ಸೋಂಕಿನ ವಿರುದ್ಧ ಕೊರೊನಾ ಲಸಿಕೆ ಎಷ್ಟು ಪ್ರಯೋಜನಕಾರಿಯಾಗಬಹುದು ಎಂಬ ಕುರಿತು ಯಾವುದೇ ಅಧ್ಯಯನಗಳು ನಡೆದಿಲ್ಲ. ಹೀಗಾಗಿ ಜಾಗತಿಕವಾಗಿ, ಮಕ್ಕಳಲ್ಲಿ ಕೊರೊನಾ ಸೋಂಕು ತೀವ್ರತರವಾಗಿಲ್ಲ ಎಂಬುದು ತಿಳಿದುಬಂದಿದೆ ಎಂದಿದ್ದಾರೆ.
'ಮಕ್ಕಳಲ್ಲಿ ಕೊರೊನಾ ಸೋಂಕು ಸೌಮ್ಯ ಸ್ವರೂಪದ್ದಾಗಿರುತ್ತದೆ. ಕೆಲವು ಮಕ್ಕಳಲ್ಲಿ ಸಾಮಾನ್ಯ ಶೀತದಂತೆ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ಝೈಡಸ್ ಕ್ಯಾಡಿಲಾ, ಭಾರತ್ ಬಯೋಟೆಕ್, ಫೈಜರ್ ಅಥವಾ ಮಾಡೆರ್ನಾ ಲಸಿಕೆಗಳು ಮಕ್ಕಳಿಗೆ ಎಷ್ಟು ಪ್ರಯೋಜನಕಾರಿಯಾಗಿವೆ ಎಂಬ ಅಂಶ ತಿಳಿದುಬರಬೇಕಿದೆ. ಈ ಲಸಿಕೆಗಳು ಸೋಂಕಿನ ಗಂಭೀರತೆಯನ್ನು ತಗ್ಗಿಸುತ್ತವೆ. ಸೋಂಕನ್ನಲ್ಲ' ಎಂದು ರೈ ಹೇಳಿದ್ದಾರೆ.
ಕೋವ್ಯಾಕ್ಸಿನ್ ಪ್ರಯೋಗ:
ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯು ವಯಸ್ಕರಂತೆಯೇ ಮಕ್ಕಳಲ್ಲಿ ಕೂಡ ಪರಿಣಾಮ ತೋರುತ್ತದೆ. ಲಸಿಕೆಯ ಸುರಕ್ಷತೆ ಹಾಗೂ ರೋಗನಿರೋಧಕ ಶಕ್ತಿ ಮಕ್ಕಳಲ್ಲಿಯೂ ವಯಸ್ಕರಂತೆಯೇ ಇರಲಿದೆ ಎಂದು ತಿಳಿದುಬಂದಿರುವುದಾಗಿ ಸಂಜಯ್ ಕೆ ರೈ ಮಾಹಿತಿ ನೀಡಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಮೂರು ವಯೋಮಾನದವರಲ್ಲಿ ನಡೆಸಲಾಗಿದೆ. ಮೊದಲು 12-18 ವಯೋಮಾನದವರಲ್ಲಿ, ಎರಡನೆಯದಾಗಿ 6-12 ವಯೋಮಾನ ಹಾಗೂ ಮೂರನೆಯದಾಗಿ 2-6 ವಯೋಮಾನದವರಲ್ಲಿ ಲಸಿಕೆ ಪ್ರಯೋಗ ನಡೆಸಲಾಗಿದೆ. ಈ ಪ್ರಯೋಗಗಳಲ್ಲಿ ಕೋವ್ಯಾಕ್ಸಿನ್ ವಯಸ್ಕರಂತೆಯೇ ಮಕ್ಕಳ ಮೇಲೂ ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ. ಅಂತಿಮ ವರದಿಗೆ ಕಾಯುತ್ತಿದ್ದೇವೆ ಎಂದು ರೈ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ಮೊದಲು ಲಸಿಕೆ ಉತ್ಪಾದನೆ ಮಾಡಿದ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಒಂದಾಗಿದೆ. ಕೊರೊನಾ ಸೋಂಕಿನ ವಿರುದ್ಧ ವಯಸ್ಕರಲ್ಲಿ ಕೋವ್ಯಾಕ್ಸಿನ್ ಲಸಿಕೆ 77.8% ದಕ್ಷತೆ ತೋರಿದೆ.
ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಮೊದಲು ಲಸಿಕೆ ಸಿದ್ಧಪಡಿಸಿದ ಭಾರತ್ ಬಯೋಟೆಕ್ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಸಿದೆ. ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಹಾಗೂ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಗೊಳಿಸಿದ ಭಾರತ್ ಬಯೋಟೆಕ್, 18 ವರ್ಷದೊಳಗಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ 2/3 ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಿದೆ.
ಕೊರೊನಾ ವಿರುದ್ಧ ಇದೇ ಸಂಸ್ಥೆ ಮೂಗಿನ ಮೂಲಕ ನೀಡುವ ಇಂಟ್ರಾನೇಸಲ್ ಲಸಿಕೆಯ ಎರಡನೇ ಹಂತದ ಪ್ರಯೋಗ ನಡೆಸಿದ್ದು, ಈ ಪ್ರಯೋಗ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎಲಾ ಘೋಷಿಸಿದೆ.
ಮಕ್ಕಳಿಗೆ ಝೈಕೋವ್ ಡಿ ಲಸಿಕೆಗೆ ಅನುಮೋದನೆ:
ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದ್ದು, ಈ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ತೋರಲಿದೆ ಎಂದು ಕೆಲವು ತಜ್ಞರು ಅಂದಾಜು ಮಾಡಿದ್ದಾರೆ. ಹೀಗಾಗಿ ಮಕ್ಕಳಿಗೆ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಲು ಹಲವು ಸಂಸ್ಥೆಗಳು ಮುಂದಾಗಿವೆ.
ಈಗಾಗಲೇ ದೇಶದ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್ ಡಿ ಲಸಿಕೆಯನ್ನು ಮಕ್ಕಳಿಗೆ ನೀಡಲು ಭಾರತದಲ್ಲಿ ಅನುಮೋದನೆ ನೀಡಲಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭಗೊಳ್ಳುವ ಸೂಚನೆಯಿದೆ.