ಕೋಲ್ಕತ್ತ: 'ಬಿಜೆಪಿಯವರು ನಂದಿಗ್ರಾಮದಲ್ಲಿ ನನ್ನ ವಿರುದ್ಧ ನಡೆಸಿದ್ದ ಸಂಚಿಗೆ ಭವಾನಿಪುರದ ಮತದಾರರು ತಕ್ಕ ಉತ್ತರ ನೀಡಿದ್ದಾರೆ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭವಾನಿಪುರದಲ್ಲಿ ಶೇ 46 ರಷ್ಟು ಜನರು ಬಂಗಾಳಿಗಳಲ್ಲದವರಿದ್ದಾರೆ. ಅವರೆಲ್ಲರೂ ನನಗೆ ಮತ ಹಾಕಿದ್ದಾರೆ. ರಾಜ್ಯದ ಜನರು ಇದೀಗ ಭವಾನಿಪುರದತ್ತ ನೋಡುತ್ತಿದ್ದಾರೆ. ಇದು ನನಗೆ ಸ್ಫೂರ್ತಿ ನೀಡಿದೆ' ಎಂದಿದ್ದಾರೆ.
'ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದಲ್ಲೂ ಕೇಂದ್ರ ಸರ್ಕಾರ ನಮ್ಮನ್ನು (ಟಿಎಂಸಿ) ಅಧಿಕಾರದಿಂದ ದೂರವಿಡಲು ಸಂಚು ರೂಪಿಸಿತ್ತು. ಜತೆಗೆ, ನಾನು ಚುನಾವಣೆಗೆ ಸ್ಪರ್ಧಿಸದಂತೆ ಅಡ್ಡಿಯುಂಟು ಮಾಡಲಾಗಿತ್ತು' ಎಂದು ಮಮತಾ ಆರೋಪಿಸಿದ್ದಾರೆ.
'ನನಗೆ ಮತ ನೀಡಿದ ಮತದಾರರಿಗೆ ಮತ್ತು ಆರು ತಿಂಗಳೊಳಗೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಟ್ಟ ಚುನಾವಣಾ ಆಯೋಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ' ಎಂದಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೇವಾಲ್ ವಿರುದ್ಧ ಸುಮಾರು 58,835 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ಏ.1ರಂದು ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೆಂದು ಅಧಿಕಾರಿ, ಮಮತಾ ವಿರುದ್ಧ 1,900 ಮತಗಳ ಅಂತರದ ಗೆಲುವು ಸಾಧಿಸಿದ್ದರು.