ನವದೆಹಲಿ:ಭಾರತಲ್ಲಿ ಮಕ್ಕಳ ಮೊದಲ ಕೊರೊನಾ ಲಸಿಕೆ ಜೈಡಸ್ ಕ್ಯಾಡಿಲಾದ ಜೈಕೋವ್-ಡಿಯ ಬೆಲೆಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಈ ಕುರಿತು ಮಾತನಾಡಿದ್ದು, ''ಜೈಕೋವ್-ಡಿಲಸಿಕೆಯ ಬೆಲೆಯನ್ನು ಅಂತಿಮಗೊಳಿಸಲಾಗಿದೆ, ಭಾರತದ ಡ್ರಗ್ ಕಂಟ್ರೋಲರ್ ಜನರಲ್‌ನಿಂದ ತುರ್ತು ಬಳಕೆಯ ಅನುಮತಿಯನ್ನು ಪಡೆದ ಬಳಿಕ ತಯಾರಕರು ತಕ್ಷಣವೇ ಲಸಿಕೆಯ ಉತ್ಪಾದನೆ ಆರಂಭಿಸಿದ್ದಾರೆ'' ಎಂದರು.
ಮೂಲಗಳ ಪ್ರಕಾರ ಲಸಿಕೆಯ ಬೆಲೆ ಕುರಿತು ಸರ್ಕಾರ ಮಾತುಕತೆ ನಡೆಸಿದೆ, ತಯಾರಕರು ಬೇಡಿಕೆ ಇಟ್ಟಿದ್ದಕ್ಕಿಂತ ಕಡಿಮೆ ಆದರೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ಗೆ ಸರ್ಕಾರವು ಪಾವತಿಸುವುದಕ್ಕಿಂತ ಹೆಚ್ಚು ಬೆಲೆ ಎನ್ನಲಾಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಖುದ್ದಾಗಿ ಈ ಕುರಿತು ಮಾಹಿತಿ ನೀಡಲಿದೆ.
12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಬಹುದಾಗಿದೆ. ಭಾರತದಲ್ಲಿ ಜೈಡಸ್ ಕ್ಯಾಡಿಲಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಭಾರತೀಯ ಔಷಧ ನಿಯಂತ್ರಕ (DCGI) ಜೈಡಸ್ ಕ್ಯಾಡಿಲಾ ಅವರ ಮೂರು ಡೋಸ್ಗಳ ಡಿಎನ್‌ಎ ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ ಅನುಮೋದಿಸಿದೆ.
ಈ ಲಸಿಕೆಯನ್ನು ಮಕ್ಕಳಿಗೆ 3 ಡೋಸ್ಗಳು ನೀಡಬೇಕಾಗುತ್ತದೆ. ದೇಶದಲ್ಲಿ ಬಳಕೆಗೆ ಅಧಿಕೃತವಾಗಿ ಲಭ್ಯವಾದ 6ನೇ ಕೊರೊನಾ ಲಸಿಕೆ ಇದಾಗಿದೆ.
ಭಾರತ ಮಕ್ಕಳಿಗೆ ಮೊದಲ ಲಸಿಕೆಯನ್ನು ಅನುಮೋದಿಸಿದೆ. ದೇಶದಲ್ಲಿ ಮುಂಬರುವ ಕೊರೊನಾ ಅಲೆ ಎಚ್ಚರಿಕೆಯ ನಡುವೆ ಸಕಾಲಿಕ ಕ್ರಮ ಇದಾಗಿದೆ. ಕೆಲವು ತಜ್ಞರು ಕೊರೊನಾ 3ನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ. ಸಾಂಕ್ರಾಮಿಕ ರೋಗದ ಮುಂದಿನ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತದೆ ಎನ್ನಲಾಗುತ್ತಿತ್ತು. ಈ ಆತಂಕದ ಮಧ್ಯೆಯೇ ಮಕ್ಕಳ ಲಸಿಕೆ ಲಭ್ಯವಾಗಿರುವುದು ಭಾರತದ ಪೋಷಕರ ಪಾಲಿಗೆ ನಿಜಕ್ಕೂ ದೊಡ್ಡ ನಿರಾಳವನ್ನು ತರಿಸಿದೆ.
ವಾರ್ಷಿಕವಾಗಿ 100 ದಶಲಕ್ಷದಿಂದ 120 ಮಿಲಿಯನ್ ZyCoV-D ಡೋಸ್‌ಗಳನ್ನು ತಯಾರಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಜುಲೈ 1 ರಂದು ZyCoV-D ಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ್ದತ್ತು.
28,000 ಜನರ ಮೇಲೆ ನಡೆದ ಪ್ರಯೋಗದಲ್ಲಿ ಈ ಲಸಿಕೆ 66.6% ಪರಿಣಾಮಕಾರಿ ಎಂದು ಸಾಬೀತಾಗಿದೆ. 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ 28,000 ಜನರ ಮೇಲೆ ಲಸಿಕೆಯನ್ನು ಪ್ರಯೋಗ ನಡೆಸಿದಾಗ ಶೇಕಡಾ 66.6 ರಷ್ಟು ಪ್ರಾಥಮಿಕ ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತದಲ್ಲಿ ಇದುವರೆ ನಡೆದ ಅತಿದೊಡ್ಡ ಲಸಿಕಾ ಪ್ರಯೋಗ ಇದಾಗಿದೆ.12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಜೈಕೋವ್-ಡಿ ಲಸಿಕೆ ಬಹಳ ಪರಿಣಾಮಕಾರಿಯಾಗಲಿದೆ.
ಮುಂದಿನ ವರ್ಷ ಆಗಸ್ಟ್ ವೇಳೆಗೆ ಪ್ರತಿ ತಿಂಗಳು 5 ಕೋಟಿ ಜೈಕೋವ್-ಡಿ ಲಸಿಕೆಗಳನ್ನು ಉತ್ಪಾದನೆ ಮಾಡಲಾಗುವುದು. ಭಾರತ ಮೂಲಕ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ಗೆ ಈಗಾಗಲೇ ಅನುಮತಿ ಸಿಕ್ಕು, ಎಲ್ಲೆಡೆ ವಿತರಣೆ ಮಾಡಲಾಗುತ್ತಿದೆ. ಅದರ ಬಳಿಕ ಭಾರತ ಮೂಲದ ಎರಡನೇ ಕೊವಿಡ್ ಲಸಿಕೆಯೆಂಬ ಹೆಗ್ಗಳಿಕೆಗೆ ಜೈಕೋವ್-ಡಿ ಲಸಿಕೆ ಪಾತ್ರವಾಗಿದೆ.
ಭಾರತದಲ್ಲಿ ಈಗಾಗಲೇ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ, ಮಾಡೆರ್ನಾ, ಜಾನ್ಸನ್ ಆಯಂಡ್ ಜಾನ್ಸನ್ ಲಸಿಕೆಗಳ ಬಳಕೆಗೆ ಅನುಮತಿ ಸಿಕ್ಕಿದೆ. ಇದರ ಜೊತೆಗೆ ಜೈಕೊವ್-ಡಿ ಮೂರು ಡೋಸ್ನ ಲಸಿಕೆಯ ತುರ್ತು ಬಳಕೆಗೂ ಅನುಮತಿ ಸಿಗುವ ಮೂಲಕ ಭಾರತದಲ್ಲಿರುವ ಕೊವಿಡ್ ಲಸಿಕೆಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಮಕ್ಕಳಿಗಾಗಿ ತಯಾರಿಸಿದ ಫೈಜರ್ ಲಸಿಕೆಗೆ ಈಗಾಗಲೇ ಅಮೆರಿಕದಲ್ಲಿ ಅನುಮೋದನೆ ಸಿಕ್ಕಿದೆ. ಮೂರನೇ ಅಲೆ ಆರಂಭವಾಗುವುದರೊಳಗೆ ಮಕ್ಕಳಿಗೂ ಕೋವಿಡ್ ಲಸಿಕೆ ಹಾಕಿಸುವ ಯೋಚನೆ ಕೇಂದ್ರ ಸರ್ಕಾರದ್ದಾಗಿದೆ.
ಈಗಾಗಲೇ ಹಲವು ಕಂಪನಿಗಳು ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಮತ್ತು ಜೈಡಸ್ ಕ್ಯಾಡಿಲಾ ಮಕ್ಕಳ ಕೋವಿಡ್ ಲಸಿಕೆಯ ಬಗ್ಗೆ ಪ್ರಯೋಗಗಳನ್ನು ನಡೆಸಿದ್ದವು. ಅದರಲ್ಲಿ ಜೈಡಸ್ ಕ್ಯಾಡಿಲಾ ಯಶಸ್ವಿಯಾಗಿದ್ದು, ಜೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ.