ಬೆಂಗಳೂರು; ಕನ್ನಡ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅoತ್ಯಪ್ರಿಯೆಯನ್ನು ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಪುನೀತ್ ರಾಜ್‍ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಕಂಠೀರವ ಸ್ಟೇಡಿಯಂನಲ್ಲಿ ಶುಕ್ರವಾರ ಸಂಜೆಯಿಂದ ನಡೆಯುತ್ತಿದೆ. ಲಕ್ಷಾಂತರ ಅಭಿಮಾನಿಗಳು, ರಾಜಕೀಯ ಮತ್ತು ಸಿನಿಮಾ ರಂಗದ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ನಟ ಜಗ್ಗೇಶ್ ಅಕ್ಟೋಬರ್ 29ರಂದು ಒಂದು ಟ್ವೀಟ್ ಮಾಡಿದ್ದರು. 'ಕನ್ನಡ ನಾಡು ನುಡಿಗಾಗಿ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ನಮ್ಮ ಪುನೀತನಿಗೆ ಮರಣೋತ್ತರ ಪ್ರಶಸ್ತಿ ಎಂದು ನೀಡಿ ಮಾನ್ಯ ಮುಖ್ಯಮಂತ್ರಿಗಳೇ ಕನ್ನಡಿಗರ ಪ್ರೀತಿಗೆದ್ದ ರಾಜಣ್ಣನ ಮಗನ ಆತ್ಮಕ್ಕೆ ಗೌರವಿಸಿದಂತೆ ಆಗುವುದು ಎಂದು ನನ್ನ ವಿನಂತಿ' ಎಂದು ಮನವಿ ಮಾಡಿದ್ದರು.
ಬಳಿಕ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುನೀತ್ ಲಕ್ಷಾಂತರ ಅಭಿಮಾನಿಗಳು ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಪಟ್ಟಿ ಇನ್ನೂ ಬಿಡುಗಡೆಗೊಂಡಿಲ್ಲ.
ಪ್ರಶಸ್ತಿಗೆ ತಾಂತ್ರಿಕ ತೊಡಕು: ನಟ ದಿ. ಪುನೀತ್ ರಾಜ್‍ಕುಮಾರ್‍ಗೆ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದ ಚರ್ಚೆ ಸರ್ಕಾರದ ಮಟ್ಟದಲ್ಲಿಯೂ ನಡೆಸಲಾಗಿದೆ. ಪುನೀತ್ ರಾಜ್‍ಕುಮಾರ್‍ಗೆ ಪ್ರಶಸ್ತಿ ನೀಡಬಹುದೇ ಎಂದು ಪರಿಶೀಲನೆ ನಡೆಸಿದೆ. ಆಗ ಇರುವ ತಾಂತ್ರಿಕ ತೊಡಕಿನ ಬಗ್ಗೆ ಮಾಹಿತಿ ಸಿಕ್ಕಿದೆ.
ತಾಂತ್ರಿಕ ತೊಡಕು ಏನಿದೆ? ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಸಮಿತಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಹಲವು ಶಿಫಾರಸುಗಳನ್ನು ಮಾಡಿದೆ. ಅದರ ಪ್ರಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಮರಣೋತ್ತರವಾಗಿ ಆಯ್ಕೆ ಮಾಡುವಂತಿಲ್ಲ. ಆದ್ದರಿಂದ ಪುನೀತ್ ರಾಜ್‍ಕುಮಾರ್ ಅಭಿಯಾನಿಗಳ ಆಗ್ರಹದಂತೆ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಸಾಧ್ಯವಿಲ್ಲ. ಕರ್ನಾಟಕದ ಮಟ್ಟಿಗೆ ರಾಜ್ಯೋತ್ಸವ ಪ್ರಶಸ್ತಿ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದೆ. ಹಲವಾರು ಬಾರಿ ಸಾಧಕರ ಆಯ್ಕೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಈ ಕುರಿತು ವಿವಾದ ಹೈಕೋರ್ಟ್ ಮೆಟ್ಟಿಲನ್ನು ಸಹ ಏರಿತ್ತು. ಆಗ ಸಮಿತಿ ರಚನೆ ಮಾಡಲಾಗಿತ್ತು.
ಮಾನದಂಡ ರೂಪಿಸುವಂತೆ ಒತ್ತಾಯ: ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸೂಕ್ತ ಮಾನದಂಡ ರೂಪಿಸುವಂತೆ ಕೋರಿ ಸಾಹಿತಿ ಬಿ. ವಿ. ಸತ್ಯನಾರಾಯಣ ಕರ್ನಾಟಕ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರಿದ್ದ ಏಕದಸ್ಯ ಪೀಠ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿತ್ತು. ಇದರ ಅನ್ವಯ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದ್ದು, ಸಮಿತಿ ಶಿಫಾರಸುಗಳ ಅನ್ವಯ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ.