ಉಪ್ಪಳ: ರಾಜ್ಯ ಸಭಾ ಸದಸ್ಯ, ಕೇಂದ್ರ ನಾಳಿಕೇರ ಅಭಿವೃದ್ದಿ ಮಂಡಳಿಯ ಸದಸ್ಯ, ಚಲನಚಿತ್ರ ನಟ ಸುರೇಶ್ ಗೋಪಿ ಯವರು ಸೋಮವಾರ ಸಂಜೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಭೇಟಿ ನೀಡಿ ಕೋವಿಡ್ ನಿಯಮಗಳನ್ನು ಪಾಲಿಸಿ ಸರಳವಾಗಿ ನಡೆದ 108 ತೆಂಗಿನ ಸಸಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಯವರ ಉಪಸ್ಥಿತಿಯಲ್ಲಿ ಆಶ್ರಮದ ನಕ್ಷತ್ರ ವನದಲ್ಲಿ ತೆಂಗಿನ ಸಸಿಯನ್ನು ನೆಟ್ಟು ಬಳಿಕ ಸಸಿಗಳನ್ನು ವಿತರಿಸಿದರು. ಇದಕ್ಕಿಂತ ಮೊದಲು ಸ್ವಾಮೀಜಿಯವರಿಗೆ ಸುರೇಶ್ ಗೋಪಿಯವರು ತುಳಸೀ ಹಾರವನ್ನು ಹಾಕಿ ಪ್ರಸಾದ ಸ್ವೀಕರಿಸಿದರು. ಇದೇ ವೇಳೆ ಗೋ ಶಾಲೆಯನ್ನು ವೀಕ್ಷಿಸಿದರು. ಬಳಿಕ ದೀಪ ಪ್ರಜ್ವಲಿಸಿ, ತೆಂಗಿನ ಹೂವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ಗಣ್ಯರಾದ ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕೋಳಾರು ಸತೀಶ್ಚಂದ್ರ ಭಂಡಾರಿ, ಯು.ಎಂ ಭಾಸ್ಕರ ಉಪ್ಪಳ, ಗಣೇಶ ಕಾಞಂಗಾಡ್, ಶ್ರೀಧರ ಶೆಟ್ಟಿ ಮುಟ್ಟಂ, ಅನಿಲ್ ಕುಮಾರ್ ಕೂಡ್ಲು, ವಾಣಿಸುರೇಶ್ ಆಚಾರ್ಯ ಕೊಂಡೆವೂರು ಇವರಿಗೆ ತೆಂಗಿನ ಸಸಿಯನ್ನು ವಿತರಿಸಿದರು. ಸುರೇಶ್ ಗೋಪಿ ಜೊತೆ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉಪಸ್ಥಿತರಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನೇತಾರರು, ಹಲವು ಗಣ್ಯ ವ್ಯಕ್ತಿಗಳ ಸಹಿತ ಭಕ್ತರು ಪಾಲ್ಗೊಂಡರು. ಸುರೇಶ್ ಗೋಪಿ ತೆರಳಿದ ಬಳಿಕ ಉಳಿದ ತೆಂಗಿನ ಸಸಿಗಳನ್ನು ಸ್ವಾಮೀಜಿಯವರು ವಿತರಿಸಿದರು.