ನವದೆಹಲಿ :ಭಾರತ ಸರಕಾರವು ತಾಳೆ ಎಣ್ಣೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಆಮದು ತೆರಿಗೆಗಳಲ್ಲಿ ಕಡಿತ ಮಾಡಿದೆ. ದೇಶದಲ್ಲಿ ಖಾದ್ಯ ತೈಲ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಈ ಆಮದು ತೆರಿಗೆಗಳಲ್ಲಿ ಕಡಿತವು ಖಾದ್ಯ ತೈಲಗಳ ಬೆಲೆಯನ್ನು ಇಳಿಸುವ ಸಾಧ್ಯತೆಯಿದೆಯಲ್ಲದೆ ಆಮದು ಪ್ರಮಾಣವೂ ಏರಿಕೆಯಾಗುವ ನಿರೀಕ್ಷೆಯಿದೆ.
ಸರಕಾರದ ಅಧಿಸೂಚನೆಯಂತೆ ತಾಳೆ ಎಣ್ಣೆ ಮೇಲಿನ ಆಮದು ತೆರಿಗೆ ಶೇ 10ರಿಂದ ಶೇ 2.5ಕ್ಕೆ ಇಳಿಸಲಾಗಿದ್ದರೆ, ಕಚ್ಛಾ ಸೋಯಾ ಎಣ್ಣೆ ಹಾಗೂ ಕಚ್ಛಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ತೆರಿಗೆಯನ್ನು ಶೇ 7.5ರಿಂದ ಶೇ 2.5ಕ್ಕೆ ಇಳಿಸಲಾಗಿದೆ.
ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ತೆರಿಗೆಯನ್ನು ಶೇ 37.5ರಿಂದ ಶೇ 32.5ಗೆ ಇಳಿಸಲಾಗಿದೆ.
ಈ ತೆರಿಗೆ ಕಡಿತದಿಂದಾಗಿ ಕಚ್ಛಾ ತಾಳೆ ಎಣ್ಣೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆಗಳ ಆಮದು ಮೇಲೆ ಒಟ್ಟಾರೆಯಾಗಿ ಶೇ 24.75 ತೆರಿಗೆ ಇದ್ದರೆ ಸಂಸ್ಕರಿತ ಎಣ್ಣೆಯ ಮೇಲೆ ಒಟ್ಟು ಶೇ 35.75 ತೆರಿಗೆಯಿರಲಿದೆ.
ದೇಶೀಯವಾಗಿ ಬಳಕೆಯಾಗುವ ಖಾದ್ಯ ತೈಲದ ಮೂರನೇ ಎರಡಂಶದಷ್ಟನ್ನು ಭಾರತ ಆಮದುಗೊಳಿಸುತ್ತಿದೆ.